ಜಿಲ್ಲೆ

ವಿಸ್ಮಯಗೊಳಿಸಿದ ಡ್ರೋನ್ ಪ್ರದರ್ಶನ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದಿಂದ ಆಯೋಜಿಸಿದ್ದ ಡ್ರೋನ್ ಪ್ರದರ್ಶನ ಎರಡನೇ ದಿನವಾದ ಸೋಮವಾರವೂ ನೋಡುಗರನ್ನು ವಿಸ್ಮಯಗೊಳಿತು. ಇದೇ ಮೊದಲ ಬಾರಿಗೆ ದಸರೆಯಲ್ಲಿ ನಡೆದ ಅತಿದೊಡ್ಡ ಡ್ರೋನ್ ಪ್ರದರ್ಶನ ಸಾಂಸ್ಕೃತಿಕ ನಗರಿಯ ಜನರಿಗೆ ಮರೆಯಲಾಗದ ಅನುಭವ ನೀಡುವಲ್ಲಿ ಯಶಸ್ವಿಯಾಯಿತು.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಶೋನಲ್ಲಿ 1,500 ಡ್ರೋನ್‌ಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.
ಡ್ರೋನ್ ಪ್ರದರ್ಶನದ ಅರಂಭದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸಲಾಯಿತು.
ವಿಜಯ್ ಪ್ರಕಾಶ್ ಗಾಯಕ:
ಎರಡನೇ ದಿನದ ಡ್ರೋನ್ ಪ್ರದರ್ಶನದ ವೇಳೆ ಆಯೋಜಿಸಿದ್ದ ಸಂಗೀತ ರಸಸಂಜೆ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನತಣಿಸಿತು.
ಖ್ಯಾತ ಹಿನ್ನೆಲೆ ಗಾಯನ ವಿಜಯ ಪ್ರಕಾಶ್ ಪ್ರೇಕ್ಷಕರಿಗೆ ಸಂಗೀತದ ಸುಧೆ ಹರಿಸಿದರು. ತಮ್ಮ ಗಾಯನದ ಹಿಟ್ ಗೀತೆಗಳಾದ ಖಾಲಿ ಕ್ವಾಟ್ರು ಬಾಟ್ಲಿ ಅಂಗೆ ಲೈಫು…, ಕುಲದಲ್ಲಿ ಕೀಳ್ಯಾವುದೋ…, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು… ಸೇರಿದಂತೆ ಹಲವು ಗೀತೆಗಳನ್ನು ಹಾಡಿ ರಂಜಿಸಿದರು. ಪುನೀತ್ ರಾಜಕುಮಾರ್ ಅವರ ಗೊಂಬೆ ಹೇಳುತೈತೆ ಹಾಡಿಗೆ ಇಡೀ ಮೈದಾನವೇ ತಲೆದೂಗಿ ಮೊಬೈಲ್ ಲೈಟ್ ಮೂಲಕ ಗೌರವ ಸೂಚಿಸಿದರು.
ಶಾಸಕ ಡಿ.ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಇತರರು ಇದ್ದರು.