ಬೆಟ್ಟಳ್ಳಿ ಮಾರಮ್ಮನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಿರುವುದು. 
ಜಿಲ್ಲೆ

ಹನೂರು ತಾಲೂಕಿನ ವಿವಿಧ ದೇಗುಲಗಳಲ್ಲಿ ಅಮಾವಾಸ್ಯೆ ಪೂಜೆ

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಲ್ಲಿ ಸೋಮವಾರ ಬೆನಕನ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿತು.

ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ, ಆರ್.ಎಸ್ ದೊಡ್ಡಿಯ ಮಹದೇಶ್ವರಸ್ವಾಮಿ, ದಿಂಬಾಳೇಶ್ವರ, ಮಂಗಲದ ಕೋಣನ ಮಾರಮ್ಮ, ವೈಶಂಪಾಳ್ಯದ ಶಿವಲಂಕಾರೇಶ್ವರ, ಕೌದಳ್ಳಿ ಮಹದೇಶ್ವರ, ಲೊಕ್ಕನಹಳ್ಳಿಯ ಸಂಪಿಗೇಶ್ವರ, ಬಂಡಳ್ಳಿಯ ಈಶ್ವರ ದೇಗುಲ ಸೇರಿದಂತೆ ತಾಲೂಕಿನ ಇತರ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಆಗಮಿಸಿದ ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸುವ ಮೂಲಕ ದೇವರ ದರ್ಶನ ಪಡೆದರು. ಇದರಿಂದ ದೇಗುಲಗಳು ಬೆಳಗ್ಗೆಯಿಂದ ಸಂಜೆವರೆಗೆ ಭಕ್ತಗಣದಿಂದ ತುಂಬಿ ತುಳುಕುತ್ತಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಗಿತ್ತು. ಎಲ್ಲ ದೇಗುಲಗಳು ತಳೀರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗಾರಗೊಂಡಿತ್ತು.

ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ದೇವಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಮುಂಜಾನೆ 5.30ಕ್ಕೆ ದೇವಿಗೆ ಪನ್ನೀರು, ಎಳನೀರು, ಅರಿಶಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕ ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ದೀಪ, ಧೂಪಧಾರತಿ ಸೇವೆ ನೆರವೇರಿಸಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಪಟ್ಟಣ ಸೇರಿದಂತೆ ಮಂಗಲ, ಭೈರನತ್ತ, ಉದ್ದನೂರು, ಬೆಳತ್ತೂರು, ಅಜ್ಜೀಪುರ, ಮಾಲಾಪುರ, ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ಆರ್.ಎಸ್ ದೊಡ್ಡಿ ಹಾಗೂ ಇತರ ಗ್ರಾಮಗಳಿಂದ ಆಗಮಿಸಿದ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲ ಮುಂಭಾಗ ಉಪ್ಪು ಸುರಿದು ನಮಿಸಿದರು. ಕೆಲ ಭಕ್ತರು ತುಪ್ಪ ಹಾಗೂ ನಿಂಬೆಹಣ್ಣಿನ ಆರತಿ ಸೇವೆ ನೆರವೇರಿಸಿದರು. ಅರ್ಚಕ ಜಯಂತ್‌ರಾವ್ ಸಿಂಧ್ಯೆ ಪೂಜಾ ಕೈಂಕರ್ಯ ನೆರವೇರಿಸಿದರು.

ಆರ್.ಎಸ್. ದೊಡ್ಡಿ ಬಳಿಯ ದಿಂಬಾದಳೇಶ್ವರ ದೇಗುಲದಲ್ಲೂ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಬೆಳಗಿನ ಜಾವ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ದೇಗುಲದ ವತಿಯಿಂದ ಪ್ರಸಾದ ವಿನಿಯೋಗಿಸಲಾಗಿತ್ತು.

.