ಜಿಲ್ಲೆ

ಅಮರ್ ಜವಾನ್ ಸ್ಮಾರಕದಲ್ಲಿ ರೋಟರಿ ವುಡ್ಸ್ ವತಿಯಿಂದ ಕಾರ್ಗಿಲ್ ವಿಜಯ ದಿನಾಚರಣೆ

ಸುನಿಲ್ ಪೊನ್ನೇಟಿ

ಮಡಿಕೇರಿ
ಕೊಡಗು ಜಿಲ್ಲೆಯ ಮಾಜಿ ಸೈನಿಕರ ಪ್ರಮುಖ ಬೇಡಿಕೆಯಾಗಿರುವ ಮಡಿಕೇರಿಯಲ್ಲಿ ಸಮುದಾಯ ಭವನ ನಿರ್ಮಾಣ ಸಂಬಂಧಿತ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ರೋಟರಿ ವುಡ್ಸ್ ವತಿಯಿಂದ ನೆಹರು ಯುವಕೇಂದ್ರ ಹಾಗೂ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಗಿಲ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ ೫೦೦೦ ಕ್ಕೂ ಅಧಿಕ ಮಾಜಿ ಯೋಧರಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಮಾಜಿ ಯೋಧರಿಗೆ ಅವರದ್ದೇ ಆದ ಸಮುದಾಯ ಭವನಗಳಿದೆ. ಆದರೆ ಬಹಳ ವರ್ಷಗಳಿಂದಲೂ ಮಾಜಿ ಸೈನಿಕರ ಮುಖ್ಯ ಬೇಡಿಕೆಯಾಗಿದ್ದ ಸಮುದಾಯ ಭವನದ ಅಗತ್ಯತೆ ಇಂದಿಗೂ ಈಡೇರಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಜಿಲ್ಲಾಡಳಿತದ ಮೂಲಕ ಸೂಕ್ತ ನಿವೇಶನ ಗುರುತಿಸಿ ಸಮುದಾಯ ಭವನವನ್ನು ಮಾಜಿ ಸೈನಿಕರ ಸಂಘಕ್ಕೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಕಾರ್ಗಿಲ್ ವಿಜಯೋತ್ಸವದಂದು ಪ್ರತೀಯೋರ್ವರು ನಮ್ಮ ದೇಶದ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೇ ಹೋರಾಡುತ್ತಿರುವ ವೀರಯೋಧರನ್ನು ಸ್ಮರಿಸಬೇಕು. ಅಂತೆಯೇ ಕಾರ್ಗಿಲ್ ಸಮರದಲ್ಲಿ ಶತ್ರುಗಳ ವಿರುದ್ದ ಹೋರಾಡಿ ಭಾರತದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದವರನ್ನೂ ಸ್ಮರಿಸಿಕೊಳ್ಳಲೇಬೇಕಾಗಿದೆ. ಸೇನೆಯಲ್ಲಿ ದೇಶ ರಕ್ಷಣೆಯ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ಸೈನಿಕರಿಗೆ ಅಗತ್ಯ ನೆರವು ನೀಡುವುದು ಕೂಡ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕ ಗಿರೀಶ್ ಕಿಗ್ಗಾಲು, ೨೪ ವರ್ಷಗಳ ಹಿಂದೆ ಪಾಕಿಸ್ತಾನೀ ಪಡೆಗಳ ವಿರುದ್ದ ಕಾರ್ಗಿಲ್ ವಲಯದಲ್ಲಿ ನಡೆದ ಸಮರದಲ್ಲಿ ಭಾರತದ ಎರಡು ಮಿಗ್ ಹಾಗೂ ಒಂದು ಹೆಲಿಕಾಪ್ಟರ್ ಪತನಗೊಂಡದ್ದಲ್ಲದೆ ೫೨೭ಯೋಧರು ಹುತಾತ್ಮರಾದರು. ಶತ್ರುಪಾಳಯವಾದ ೧೫೦೦ ಕ್ಕೂ ಅಧಿಕ ಸೈನಿಕರು ಸತ್ತರು. ಈ ಸಂಘರ್ಷಕ್ಕಾಗಿ ಭಾರತಕ್ಕೆ ೧೨೦೦ ಕೋಟಿ ರೂಪಾಯಿ ವೆಚ್ಚವಾಗಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನ ಸೋತದ್ದಲ್ಲದೆ ವಿಶ್ವದ ಅನೇಕ ದೇಶದ ನಾಯಕರಿಂದ ಛೀಮಾರಿಯನ್ನೂ ಹಾಕಿಸಿಕೊಂಡಿತು ಎಂದು ಸ್ಮರಿಸಿದರು.
ಕಾರ್ಗಿಲ್ ಸಮರದಲ್ಲಿ ಭಾರತದ ಗೆಲುವಿಗೆ ಕಾರಣರಾಗಿ ನಮ್ಮ ದೇಶದ ಭೂಮಿಯನ್ನು ರಕ್ಷಿಸಿದ ವೀರಯೋಧರನ್ನು ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಸ್ಮರಿಸಿದರು.

ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಸದಸ್ಯ ರಾಜೇಶ್ ಯಲ್ಲಪ್ಪ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎ.ಕೆ.ಜೀವನ್, ಕಾರ್ಯದರ್ಶಿ ಡಿ.ಐ. ಪುರುಷೋತ್ತಮ್ , ನೆಹರೂ ಯುವಕೇಂದ್ರದ ಸುಕುಮಾರ್, ದೀಪ್ತಿ,ರಂಜಿತ, .ರೋಟರಿ ಪ್ರಮುಖರಾದ ಅನಿಲ್ ಎಚ್.ಟಿ. ಬಿ.ಜಿ. ಅನಂತಶಯನ, ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಸುಮಿತ್ರಾ, ಕೊಡಗು ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರರೈ, ತಿಮ್ಮಯ್ಯ ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಮತ್ತಿತರರು ಹಾಜರಿದ್ದರು.


ಸಚಿವರಿಂದ ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪ ನಮನ
ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜ್ ಅಮರ್ ಜವಾನ್ ಸ್ಮಾರಕಕ್ಕೆ ಪುಪ್ಪಾರ್ಚನೆ ಮಾಡಿ ಸರ್ಕಾರದ ಪರವಾಗಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜು, ಎಸ್‌ಪಿ ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಸದಸ್ಯ ರಾಜೇಶ್ ಯಲ್ಲಪ್ಪ, ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಚಿನ್ನಸ್ವಾಮಿ ಇದ್ದರು.