ಕೋಟೆ ಮುನಿರಾಜು ಟೇಕಲ್
ಹಿಂದಿನ ದಿನಗಳಲ್ಲಿ ಹಿರಿಯರು ಬೇಸಿಗೆಯಲ್ಲಿ ಧನ&ಕರುಗಳಿಗೆ ನೀರಿನ ಅಭಾವ ನೀಗಿಸಲು ಊರಿಗೊಂದು ಕೆರೆಕಟ್ಟೆ, ಅಶ್ವತ್ಥಕಟ್ಟೆ, ಬಾವಿ, ಕುಂಟೆ ಕಟ್ಟುತ್ತಿದ್ದರು. ಅಂತೆಯೇ ಇಲ್ಲಿನ ಕೋಟೆ ತಿಮ್ಮನಾಯಕನಹಳ್ಳಿಯ ಬಳಿ ತಗ್ಗು ಪ್ರದೇಶದಲ್ಲಿ ನೂರು ವರ್ಷಗಳ ಹಿಂದೆ ಬೃಹದಾಕಾರವಾದ ನಿರ್ಮಿಸಿರುವ ಕಟ್ಟೆ, ಇಂದಿಗೂ ಈ ಭಾಗದ ರೈತಾಪಿ ವರ್ಗಕ್ಕೆ ಸೆಲೆಯಾಗಿದೆ.
ತಾಲೂಕಿನ ಟೇಕಲ್ ಹೋಬಳಿ ಹುಳದೇನಹಳ್ಳಿ ಗ್ರಾಮ ಪಂಚಾಯಿತಿಯ ಕೋಟೆ ತಿಮ್ಮನಾಯಕನಹಳ್ಳಿಯ ಅಮಾನಿ ಅರಸಿಕೆರೆ ಎನ್ನಲಾಗುವ ಈ ಕಟ್ಟೆಯನ್ನು 1904ರಲ್ಲಿ ಸುಮಾರು 1 ಕಿಲೋ ಮೀಟರ್ ಉದ್ದ 150 ಅಡಿ ಅಗಲದ ಸುಮಾರು 190 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ಮತ್ತು ಜನರ ದಿನಬಳಕೆಗೆ ನೀರು ಒದಗಿಸಿದ ಕೀರ್ತಿ ಸಲ್ಲುತ್ತದೆ. ಅಂತೆಯೇ ಇಂದಿಗೂ ನೀರು ತುಂಬಿ ಕಂಗೊಳಿಸುತ್ತಿದೆ.
ಮಳೆ ಬಂದರೆ ವಿವಿಧ ಭಾಗಗಳಿಂದ ಹರಿದು ಬರುವ ನೀರು ಕೆರೆಗೆ ತುಂಬಿದರೆ ಸಮುದ್ರದಂತೆ ಭಾಸವಾಗುತ್ತದೆ. ಕೆರೆ ಕೋಡಿ ಹರಿದಾಗ ನೋಡಲು ಸಾವಿರಾರು ಜನರ ದಂಡೇ ಕೆರೆಯತ್ತ ಆಗಮಿಸುತ್ತದೆ.
ಜಿಲ್ಲಾ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ ಹೆಚ್ಚು ವಿಸ್ತೀರ್ಣ ಇರುವ ತಾಲೂಕಿನ 11 ಕೆರೆಗಳಲ್ಲಿ ಇದು ಒಂದಾಗಿದ್ದು, ಕೆರೆ ತುಂಬಿದರೆ ಸುತ್ತ ಮುತ್ತಲಿನ ಕೊಟ್ಟೆ ತಿಮ್ಮನಾಯಕನಹಳ್ಳಿ, ವೆಂಕಟರಾಜಹಳ್ಳಿ, ತೋರಹಳ್ಳಿ, ಜಿನಗತಿನಹಳ್ಳಿ, ಓಜಾರಹಳ್ಳಿ, ಸೀತಹಳ್ಳಿ, ಶೆಟ್ಟಿಹಳ್ಳಿ, ಕೋಮ್ಮನಹಳ್ಳಿಯ ಹಿರಿಯರು ಸೇರಿ ಒಂದೇ ದಿನ ನಿಗದಿ ಮಾಡಿ ದೀಪೋತ್ಸವ ಆಚರಿಸುವುದನ್ನು ಇಂದಿಗೂ ಕಾಣಬಹುದಾಗಿದೆ. ಇತ್ತೀಚೆಗೆ ಹುಳದೇನಹಳ್ಳಿಯಿಂದ ಜಿನಗತಿಮ್ಮನಹಳ್ಳಿ ಮಾರ್ಗವಾಗಿ ತೊರಲಕ್ಕಿ, ಮಾಸ್ತಿ ಭಾಗಗಳಿಗೆ ತೆರಳಲು ಈ ಕೆರೆಯ ಕಟ್ಟೆಯ ಮೇಲೆ ಸಂಪರ್ಕ ರಸ್ತೆಯಾಗಿದ್ದು, ಬಸ್ ಸಹ ಸಂಚರಿಸಲು ರಸ್ತೆ ಸಿದ್ಧವಾಗಿದೆ.
ತೆಪ್ಪೋತ್ಸವದ ಸಂಭ್ರಮ
ಕೆರೆ 2021&22ರಲ್ಲಿ ತುಂಬಿ ಕೋಡಿ ಹರಿದಾಗ ಸುತ್ತ ಮುತ್ತಲಿನ ಗ್ರಾಮಸ್ಥರು ಅಂದಿನ ಸಂಸದ ಎಸ್.ಮುನಿಸ್ವಾಮಿ ಮತ್ತು ಶಾಸಕ ಕೆ.ವೈ.ನಂಜೇಗೌಡ ನೇತೃತ್ವದಲ್ಲಿ ದೀಪೋತ್ಸವ ಮತ್ತು ತೆಪ್ಪೋತ್ಸವ ನಡೆಸಿ, ಜಾತ್ರೆಯಂತೆ ಸಂಭ್ರಮಿಸಿದ್ದರು. ಕೆರೆ ಕಟ್ಟೆಯ ಮೇಲೆ ಬೃಹದಾಕಾರದ ಆಲದ ಮರವಿದ್ದು, ಕೆಳಗೆ ಹೊನ್ನಮ್ಮ, ಚನ್ನಮ್ಮ ಎಂಬ ಶಕ್ತಿ ದೇವತೆಗಳು (ಅಕ್ಕ&ತಂಗಿ) ಮತ್ತು ಮುಜರಾಯಿ ಇಲಾಖೆ ವ್ಯಾಪ್ತಿಯ ಪುರಾತನ ವೀರಾಂಜನೇಯಸ್ವಾಮಿ ದೇಗುಲ ಮುಂಭಾಗ ಕಲ್ಯಾಣ ಮಂಟಪವಿದ್ದು, ಹಿಂದೆ ಇಲ್ಲಿಯೇ ಹೆಚ್ಚಾಗಿ ಮದುವೆಗಳು ಆಗುತ್ತಿದ್ದವು ಎಂದು ಹೇಳುತ್ತಾರೆ ಹಿರಿಯರು. ಆದರೆ, ಪುರಾತನ ದೇವಾಲಯಗಳಲ್ಲಿ ನಿಧಿ ಇರುತ್ತದೆ ಎಂದು ಇತ್ತೀಚೆಗೆ ನಿಧಿ ಕಳ್ಳರು ಹಲವು ಬಾರಿ ಶೋಧ ನಡೆಸಿದ್ದು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ.
ಅಂತರ್ಜಲ ವೃದ್ಧಿ
ಮಳೆ ಬಂದು ಕೆರೆ ತುಂಬಿದರೆ ಹಲವು ವರ್ಷಗಳವರೆಗೆ ಸುತ್ತಮುತ್ತಲಿನ ರೈತರು ನೀರು ಉಪಯೋಗಿಸಬಹುದಾಗಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ಅಭಾವವೂ ನೀಗಿಸುತ್ತಿದೆ. ಕೋಟೆ ತಿಮ್ಮನಾಯಕನಹಳ್ಳಿಯ ಅಮಾನಿ ಅರಸಿಕೆರೆ ಒಂದು ವಿಶೇಷವಾದರೆ ಸಮೀಪದ ಬುದಿಕೋಟೆ ನಿವಾಸಿ ಹೈದರಾಲಿ ಆಡಳಿತ ಸಂದರ್ಭದಲ್ಲಿ ಬಂಡೆ ಮೇಲೆ ಬೃಹದಾಕಾರದ ಕಲ್ಲಿನಲ್ಲಿ ಕೋಟೆ ನಿರ್ಮಿಸಿರುವುದು ಮತ್ತೊಂದು ವಿಶೇಷ.
ಇತಿಹಾಸ ರಕ್ಷಣೆಗೆ ಬೇಕು ಒತ್ತು
ಹಿಂದೆ ರಾಜರ ಆಳ್ವಿಕೆಯಲ್ಲಿ ಯುದ್ಧಗಳು ನಡೆಯುವ ಸಂದರ್ಭದಲ್ಲಿ ರಕ್ಷಣೆಗೆ ಮತ್ತು ಯುದ್ಧಕ್ಕೆ ಬೇಕಾಗುವ ಸಾಮಗ್ರಿಗಳನ್ನಿಡಲು ಎತ್ತರದ ಕಲ್ಲಿನ ಕಾಂಪೌಂಡ್ ನಿರ್ಮಿಸುತ್ತಿದ್ದರು ಎಂಬ ಕುರುಹು ಇಲ್ಲಿದೆ. ಹಾಗೆಯೇ, ಪುರಾತನ ವೇಣುಗೋಪಾಲಸ್ವಾಮಿ ದೇವಾಲಯ ಶಿಥಿಲಗೊಂಡಿದೆ. 1,508ರಲ್ಲಿ ನಿರ್ಮಾಣ ಮಾಡಿರುವ ಕೋಟೆ ಒಳಗೆ, ದೇವಾಲಯ ಸುತ್ತ ಮುತ್ತಲು ಗಿಡ&ಗಂಟಿ ಬೆಳೆದಿದೆ. ಪುರಾತತ್ವ ಇಲಾಖೆ ಅಥವಾ ಸಂಬಂಧಪಟ್ಟ ಇಲಾಖೆ, ಜನ ಪ್ರತಿನಿಧಿಗಳು ಸ್ವಚ್ಛಗೊಳಿಸಿ ಇಲ್ಲಿನ ಇತಿಹಾಸವನ್ನು ಮುಂದಿನ ಯುವ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ.
" ಸರ್ಕಾರದ ಮೇಲೆ ಒತ್ತಡ ಹಾಕಿ ಸುಂದರವಾದ ಪ್ರವಾಸಿ ತಾಣವನ್ನಾಗಿ ಮಾಡಬಹುದು. ಕೆರೆಯಲ್ಲಿ ಮೀನು ಸಾಕಣೆ ಮಾಡುವ ಮೂಲಕ ನಿರುದ್ಯೋಗಳಿಗೆ ಉದ್ಯೋಗ ನೀಡುವಂತೆ ಕೆಲಸ ಮಾಡಬಹುದು."
- ಸಮಾಜಸೇವಕರಾದ ಸುನಿಲ್ ನಂಜೇಗೌಡ