ಚಿಕ್ಕಮಗಳೂರು: ಶಿಕ್ಷಕರ ಸ್ವಾಭಿಮಾನ ಮತ್ತು ವೃತ್ತಿ ಗೌರವದ ಪಾವಿತ್ರ್ಯತೆಗೆ ಧ್ವನಿಯಾಗಲಿದ್ದೇನೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಆರ್.ಹರೀಶ್ ಆಚಾರ್ಯ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯನಾಗಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ಅತಿಥಿ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ಸಮಾಜದಲ್ಲಿ ಅತ್ಯುನ್ನತ ಸ್ಥಾನಮಾನ ಹೊಂದಿದ ವಿಶಿಷ್ಟ ವ್ಯಕ್ತಿ ಹಾಗೂ ಎಲ್ಲರನ್ನೂ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಪ್ರೇರಕ ಶಕ್ತಿ ಶಿಕ್ಷಕ. ಶಿಕ್ಷಣ ರಂಗದ ಮಹತ್ವ ಮತ್ತು ಶಿಕ್ಷಕ ಸಮುದಾಯದ ಹಿತಕ್ಕಾಗಿ ಈ ಕ್ಷೇತ್ರವನ್ನು ಗಟ್ಟಿಗೊಳಿಸಬೇಕಿದೆ. ಈ ಹಿನ್ನಲೆಯಲ್ಲಿ ನನ್ನನ್ನು ಶಿಕ್ಷಕರ ಧ್ವನಿಯಾಗಿ ಪರಿಗಣಿಸಿ ಶಿಕ್ಷಕ ಸಮುದಾಯದ ಪ್ರತಿನಿಧಿಯಾಗಿ ಬಹುಮತದಿಂದ ಚುನಾಯಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ಎಂದಿಗೂ ಮಾರಾಟದ ಸರಕ್ಕಲ್ಲ. ಆದರೆ ಶಿಕ್ಷಕರ ಮತವನ್ನು ಆಮಿಷಗಳಿಂದ ಕೊಂಡುಕೊಳ್ಳ ಬಾರದು. ಈ ಕ್ಷೇತ್ರದ ಚುನಾವಣೆಯನ್ನು ಈ ರೀತಿಯೂ ನಡೆಸಬಹುದು ಎಂಬುವುದು ಇಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಮೂಡಿರುವುದು ಈ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದಿದೆ ಎಂದರು.
ಶಿಕ್ಷಕ ವರ್ಗಕ್ಕೆ ನೆಮ್ಮದಿಯ ವೇತನವಿಲ್ಲ. ಬೋಧನಾ ಕಾರ್ಯ ನಿರ್ವಹಿಸಿದರೂ ಅದು ಸಿಗುತ್ತದೆ ಎಂಬ ಭರವಸೆ ಇಲ್ಲ. ಕನಿಷ್ಟ ರಜೆ ಸೌಲಭ್ಯವಿಲ್ಲ. ವೈದ್ಯಕೀಯ, ಹೆರಿಗೆ ರಜೆಗಳು ಮಾನವೀತೆಯನ್ನು ಅಣಕಿಸುವಂತಿದೆ. ಇಷ್ಟದರೂ ಮುಂದೆ ಸೇವೆಯಲ್ಲಿ ಮುಂದುವರಿಯುತ್ತೇವೆಯೋ ಇಲ್ಲವೋ ಎಂಬ ಅನಿಶ್ಚಿತತೆಯಲ್ಲಿ ಶಿಕ್ಷಕರಿದ್ದಾರೆ. ಒಟ್ಟಾರೆಯಾಗಿ ಸಮಾಜದಲ್ಲಿ ಇಂದು ಶಿಕ್ಷಕರು ಶೋಷಿತ ಸಮುದಾಯದ ಪ್ರತಿನಿಧಿಯಂತೆ ಕಾಣುತ್ತಿದ್ದಾರೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರು, ದೈಹಿಕ ಶಿಕ್ಷಣ ಶಿಕ್ಷಕರು,ಪದವಿಪೂರ್ವ ಕಾಲೇಜು ಶಿಕ್ಷಕರು ಪ್ರೌಢಶಾಲಾ ಶಿಕ್ಷಕರು, ಖಾಸಗಿ ಕಾಲೇಜು ಶಿಕ್ಷಕರು ಹಾಗೂ ಸರ್ಕಾರಿ ಕಾಲೇಜು ಶಿಕ್ಷಕರು ಸೇರಿದಂತೆ ಶಿಕ್ಷಕ ಸಮುದಾಯ ಆಶೋತ್ತರಗಳಿಗೆ ಧ್ವನಿಯಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ವಿಶ್ವನಾಥ, ಕವೀಶ್, ಚಂದ್ರಶೇಖರ್ ಇದ್ದರು.