ಜಿಲ್ಲೆ

ಸದಾಕಾಲ ಸನ್ಮಾರ್ಗದಲ್ಲಿ ನಡೆಯಬೇಕು

ಸೋಮನಾಥ ರೆಡ್ಡಿ

ಮುಂಡರಗಿ: ದೇವರು, ಗುರುವನ್ನು ಸ್ಮರಿಸುತ್ತಾ ಸದಾಕಾಲ ಸನ್ಮಾರ್ಗದಲ್ಲಿ ನಡೆಯಬೇಕು. ಪರರಿಗೆ ಒಳಿತನ್ನು ಬಯಸಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಗುರುವಾರ ಆಯೋಜಿಸಿದ್ದ ಕವಿರತ್ನ ಚನ್ನಕವಿ ಕೃತ ಶ್ರೀ ನಲವತ್ವಾಡದ ವೀರೇಶ್ವರ ಶರಣರ ಮಹಾಪುರಾಣ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸರಿಯಾದ ಸಮಯಕ್ಕೆ ಚಂದ್ರನ ಮೇಲೆ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಇಳಿದು ತನ್ನ ಕಾರ್ಯವನ್ನು ಸಮರ್ಪಕವಾಗಿ ಮಾಡಲು ವಿಜ್ಞಾನಿಗಳು ಉತ್ತಮ ಕೆಲಸ ಮಾಡಿದ್ದು ಶ್ಲಾಘನೀಯ ಎಂದರು.

ಪ್ರವಚನಕಾರ ಶ್ರೀ ವಿರೂಪಾಕ್ಷ ಶಾಸ್ತ್ರಿ, ವಿಜ್ಞಾನಿ ಬಸವರಾಜ ಕಲ್ಲಕುಟಗರ, ವೀಣಾ ಪಾಟೀಲ ಮಾತನಾಡಿದರು. ಕಸಾಪ ತಾಲೂಕು ಕಾರ್ಯದರ್ಶಿ ವೀಣಾ ಪಾಟೀಲ ರಚನೆಯ ವೀಣಾತರಂಗ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಪ್ರೊ. ಆರ್.ಎಲ್. ಪೊಲೀಸ ಪಾಟೀಲ ಗ್ರಂಥ ಪರಿಚಯಿಸಿದರು. ರಾಜ್ಯ ಅತ್ಯುತ್ತಮ ಸಾಧಕ ಪ್ರಶಸ್ತಿ ಪುರಸ್ಕೃತ ಕರಬಸಪ್ಪ ಹಂಚಿನಾಳ, ವರ್ತಕ ವೀರಣ್ಣ ಬೇವಿನಮರದ, ವಿಜ್ಞಾನಿ ಬಸವರಾಜ ಕಲ್ಲಕುಟಗರ, ಏಶಿಯಾಫೆಸಿಪಿಕ್ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಬೆಳ್ಳಿಪದಕ ವಿಜೇತೆ ನಿರೀಕ್ಷಿತಾ ಡೊಳ್ಳಿನ ಅವರನ್ನು ಶ್ರೀಗಳು ಸನ್ಮಾನಿಸಿದರು.

ಸೋಮನಾಥ ಗವಾಯಿಗಳು, ನಾಗಭೂಷಣ ಹಿರೇಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಭಕ್ತಿಸೇವೆ ವಹಿಸಿಕೊಂಡಿದ್ದ ಗೌರಮ್ಮ ಹುರಕಡ್ಲಿ, ಜಯಣ್ಣ ಗುಜ್ಜಲ ಅವರನ್ನು ಹಾಗೂ ಪುರಾಣ ಸೇವಾಕರ್ತರನ್ನು ಸನ್ಮಾನಿಸಲಾಯಿತು.

ಡಾ.ಬಿ.ಜಿ.ಜವಳಿ, ಕುಮಾರ ಬನ್ನಿಕೊಪ್ಪ, ರಂಗಪ್ಪ ಕೋಳಿ, ರವೀಂದ್ರಗೌಡ ಪಾಟೀಲ, ಪ್ರಶಾಂತಗೌಡ ಗುಡದಪ್ಪನವರ, ಮಂಜುನಾಥ ಶಿವಶೆಟ್ಟರ, ಅಶೋಕ ಅಂಗಡಿ, ಮಂಜುನಾಥ ಮುಧೋಳ, ಹಾಲಯ್ಯ ಹಿರೇಮಠ ಇತರರು ಇದ್ದರು. ಶಿಕ್ಷಕ ಎಸ್.ಆರ್.ರಿತ್ತಿ ಕಾರ್ಯಕ್ರಮ ನಿರೂಪಿಸಿದರು.