ಕಡೂರಿನಲ್ಲಿ ಭರತನಾಟ್ಯ ಶಾಲೆ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಮನಸೆಳೆದ ಭರತನಾಟ್ಯ ಮಕ್ಕಳ ನವದುರ್ಗಿಯರ ನೃತ್ಯ ಪ್ರದರ್ಶನ. 
ಜಿಲ್ಲೆ

ನಾಟ್ಯ ತರಬೇತಿಗೆ ಸದಾ ಸಹಕಾರ

ಕಡೂರು: ನಾಟ್ಯಪ್ರವೀಣೆ ಡಾ. ಕೆ.ವೆಂಕಟಲಕ್ಷ್ಮಮ್ಮ ಅವರ ಸಮಾಧಿ ಸಂರಕ್ಷಿಸುವ ಜವಾಬ್ದಾರಿ ನನ್ನದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಭಾನುವಾರ ನಾಟ್ಯಕೇಶವ ಭರತನಾಟ್ಯ ಶಾಲೆ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಭರತ ನಾಟ್ಯದಲ್ಲಿ ಕಡೂರಿನ ಹೆಸರನ್ನು ವಿಶ್ವಸಂಸ್ಥೆಯವರೆಗೂ ಕೊಂಡೊಯ್ದ ಡಾ. ವೆಂಕಟಲಕ್ಷ್ಮಮ್ಮ ಅವರ ಸಮಾಧಿ ದುಸ್ಥಿತಿಯಲ್ಲಿದೆ. ಅವರ ಸಮಾಧಿ ದುರಸ್ತಿ ಪಡಿಸುತ್ತೇನೆ. ಭರತನಾಟ್ಯ ತರಬೇತಿ ನೀಡುವ ಶಾಲೆ ಆರಂಭಿಸಿದ ಶಿವಮೊಗ್ಗದ ನಟನಂ ಶಾಲೆಯ ವಿ.ಕೇಶವಪಿಳ್ಳೈ ಅವರ ಶ್ರಮದಿಂದ ನಮ್ಮೂರಿನ ಮಕ್ಕಳು ವಿದೇಶದಲ್ಲಿಯೂ ಕಲಾಪ್ರದರ್ಶನ ನೀಡಿದ್ದಾರೆ. ಈ ನಾಟ್ಯ ಶಾಲೆಗೆ ನನ್ನ ಸಹಕಾರ ಸದಾ ಇರುತ್ತದೆ ಎಂದರು.
ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, 9 ವರ್ಷಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಮಕ್ಕಳಿಗೆ ಅದರಲ್ಲಿಯೂ ಗ್ರಾಮೀಣ ಮಕ್ಕಳು ನಾಟ್ಯ ತರಬೇತಿ ಪಡೆದು ವಿದೇಶಗಳಲ್ಲೂ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದು ದಾಖಲೆ ಮಾಡಿದ್ದಾರೆ ಎಂದು ಹೇಳಿದರು.
ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ಯೋಗ ಮತ್ತು ಭರತನಾಟ್ಯಮಕ್ಕಳಲ್ಲಿ ಆರೋಗ್ಯ ಕಾಪಾಡುತ್ತಿದೆ. ಭರತನಾಟ್ಯ ಶಾಲೆ ಮುಂದುವರಿಯಲು ಪುರಸಭೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಪ್ರಾಚಾರ್ಯ ವಿ.ಕೇಶವ ಪಿಳ್ಳೈ ಮಾತನಾಡಿ, ವೆಂಕಟಲಕ್ಷ್ಮಮ್ಮ ಅವರ ಸ್ಫೂರ್ತಿಯಿಂದ ಶಾಲೆ ಆರಂಭಿಸಲಾಗಿದೆ. ಶಾಲೆಗೆ ಸ್ಥಳಾವಕಾಶ ಮಾಡಿಕೊಟ್ಟ ಮಾಜಿ ಶಾಸಕ ವೈಎಸ್‌ವಿ ದತ್ತ, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಹಕಾರ ಸ್ಮರಣೀಯ ಎಂದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್, ಬಿಇಒ ಸಿದ್ದರಾಜುನಾಯ್ಕ, ಪುರಸಭೆ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಪಂಗ್ಲಿ ಮಂಜುನಾಥ್, ಚಂದ್ರಶೇಖರ್, ಮುಖ್ಯಶಿಕ್ಷಕಿ ರುಕ್ಮಿಣಿ, ಶಿಕ್ಷಕಿ ಶೋಭಾ ಇತರರಿದ್ದರು.