ವಿಜಯಪುರ: ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಕಾರ್ಯಾಚರಣೆ ಹಿನ್ನೆಲೆ ಸರ್ಕಾರ ತೆಗೆದುಕೊಳ್ಳುವ ಎಲ್ಲ ಸುರಕ್ಷಾ ಹಾಗೂ ಅಗತ್ಯ ಕ್ರಮಗಳಿಗೆ ಜೊತೆಯಾಗಿ ನಿಲ್ಲುವುದಾಗಿ ಸಂಸದ ರಮೇಶ ಜಿಗಜಿಣಗಿ ನೇತೃತ್ವದ ಕಾರ್ಯಕರ್ತರ ನಿಯೋಗ ಭರವಸೆ ನೀಡಿತು.
ಸೋಮವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರನ್ನು ಭೇಟಿ ಮಾಡಿದ ನಿಯೋಗ, ಈಗಾಗಲೇ ದೇಶಾದ್ಯಂತೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇಂಥ ಸಂದರ್ಭದಲ್ಲಿ ಸೈನಿಕರಿಗೆ ಆತ್ಮಸ್ತೈರ್ಯ ತುಂಬುವುದು, ಸರ್ಕಾರದ ಜೊತೆಗೆ ನಿಲ್ಲುವುದು ಹಾಗೂ ಆಡಳಿತ ವ್ಯವಸ್ಥೆ ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೆ ಸ್ವಾಗತಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಹೀಗಾಗಿ ಜಿಲ್ಲಾಡಳಿತದ ಜೊತೆಗೆ ಸ್ವಯಂ ಸೇವಕರಾಗಿ ನಿಲ್ಲಲು ತಾವು ಸಿದ್ಧ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯಲ್ಲಿ ಆಹಾರ, ಇಂಧನ, ಅಡುಗೆ ಅನಿಲ ಹಾಗೂ ಎಟಿಎಂಗಳಲ್ಲಿ ಹಣದ ಲಭ್ಯತೆ ಮತ್ತಿತರ ಸುರಕ್ಷಾ ಕ್ರಮಗಳತ್ತ ಆದ್ಯತೆ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದರಲ್ಲದೇ ಆ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಪಾಕಿಸ್ತಾನದ ಅನಧಿಕೃತ ಪ್ರಜೆಗಳು ಹಾಗೂ ಬಾಂಗ್ಲಾದೇಶದ ಅನಧಿಕೃತ ಪ್ರಜೆಗಳನ್ನು ಗುರುತಿಸಿ ಅವರನ್ನು ಹೊರ ಹಾಕುವ ಕುರಿತು ಕೈಗೊಂಡ ಕ್ರಮದ ಕುರಿತು ಹಾಗೂ ಜಿಲ್ಲೆಯ ಸುರಕ್ಷತಾ ಸ್ಥಿತಿಗತಿಯ ಕುರಿತು ಚರ್ಚಿಸಲಾಯಿತು
ಆ ಮೂಲಕ ಇಡೀ ಜಿಲ್ಲೆಯ ಜನತೆಗೆ ಎಂಥದೆ ಸಂದರ್ಭ ಬಂದರೂ ಎದುರಿಸಲು ಸನ್ನದ್ಧರಾಗುವ, ಅಗತ್ಯ ಬಿದ್ದರೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ ಸಂದೇಶವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪುರ, ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಕರ ಕವಟಗಿ, ಉಮೇಶ ಕಾರಜೋಳ, ಸಂಜೀವ ಐಹೊಳೆ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಸಂಜಯ ಪಾಟೀಲ ಕನಮಡಿ, ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ಎಸ್.ಎ. ಪಾಟೀಲ, ವಿಜಯ ಜೋಶಿ, ರಾಜೇಶ ತಾವಸೆ, ಸಂದೀಪ ಪಾಟೀಲ, ಜಗದೀಶ ಮುಚ್ಚಂಡಿ, ಸಂಪತ್ ಕುವಳ್ಳಿ ಮತ್ತಿತರರಿದ್ದರು.