ಜಿಲ್ಲೆ

ಕನ್ನಡದ ಕೆಲಸಕ್ಕೆ ದೇಜಗೌ ಸದಾ ಮುಂದು: ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬಣ್ಣನೆ

ಮೈಸೂರು: ಕನ್ನಡ ಅಧ್ಯಯನ ಸಂಸ್ಥೆೆಯ ರೂವಾರಿ, ಕುವೆಂಪು ವಿವಿಗೆ ಬುನಾದಿ, ಮುಕ್ತ ವಿವಿಗೆ, ಜಾನಪದ ವಿವಿಗೂ ತಳಹದಿಯಾದ ಮಹಾ ಶಿಲ್ಪಿ ದೇಜಗೌ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಗುರುವಾರ ಪದ್ಮಶ್ರೀ ಡಾ.ದೇ. ಜವರೇಗೌಡ ಅವರ 110ನೇ ಜಯಂತಿಯ ಅಂಗವಾಗಿ ಆಯೋಜಿಸಿದ್ದ ದೇಜಗೌ ನೆನಪಿನಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪು ಅವರ ಮಾತು ದೇಜಗೌ ಅವರಿಗೆ ತುಂಬಾ ಆಪ್ತವಾದದ್ದು. ಕನ್ನಡ ಕೆಲಸಕ್ಕೆ ಸದಾ ಮುಂದಾಗಿರುತ್ತಿದ್ದ ದೇಜಗೌ ಅವರು, ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಅವರೊಬ್ಬ ಗದ್ಯ ಸಾಮ್ರಾಟ, ದೈತ್ಯ ಲೇಖಕರಾಗಿದ್ದರು ಎಂದರು.

ಕನ್ನಡ ಕೆಲಸಕ್ಕಾಗಿ ಶ್ರಮಿಸಿದ ಇಂತಹ ವ್ಯಕ್ತಿಯನ್ನು ಇವತ್ತಿಗೂ ಕಂಡಿಲ್ಲ. ಕನ್ನಡ ಅಧ್ಯಯನ ಸಂಸ್ಥೆೆ, ಕುವೆಂಪು ವಿವಿ, ಮುಕ್ತ ವಿವಿ, ಜಾನಪದ ವಿವಿ ಸೇರಿದಂತೆ ಅನೇಕ ಸಂಸ್ಥೆಗಳ ಸ್ಥಾಪನೆಗೆ ರೂಪುರೇಷೆ, ಮಾರ್ಗದರ್ಶನ ನೀಡಿ ಕೆಲಸ ಮಾಡಿದ್ದರು. ಅವರು ಅನೇಕರ ಬದುಕನ್ನು ರೂಪಿಸಿದ ಸ್ಮರಣಿಯರು ಎಂದರು.

ಕುವೆಂಪು, ದೇಜಗೌ ಎರಡು ಚೇತನಗಳು ಕನ್ನಡ ಸಾಂಸ್ಕೃತಿಕ ರಾಯಭಾರಿಗಳಾಗಿದ್ದರು. ಕುವೆಂಪು ಯುಗ ಎನ್ನುವುದು ಸತ್ಯ ಹೇಗೋ ಹಾಗೆಯೇ ದೇಜಗೌ ಯುಗ ಎಂದೂ ಕರೆಯಬಹುದು. ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾಷಾಂತರ ಎಂಬುದು ಮಹತ್ವದ ಕಲೆ ಎನ್ನುವುದು ಇವತ್ತು ನಮಗೆ ಗೊತ್ತಾಗಿದೆ. ಬುಕರ್ ಪ್ರಶಸ್ತಿ, ನೊಬೆಲ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಷಾಂತರ ಆಧಾರವಾಗಿದೆ. ಆದರೆ ಬಹಳ ವರ್ಷಗಳ ಹಿಂದೆಯೇ ಭಾಷಾಂತರ ಕ್ಷೇತ್ರದಲ್ಲಿ ದೇಜಗೌ ಅವರು ಮುಂಚೂಣಿಯಲ್ಲಿದ್ದವರು ಎಂದು ಹೇಳಿದರು.

ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ದೇಜಗೌ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ, ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡಕ್ಕೆೆ ಹೆಚ್ಚು ಮನ್ನಣೆ ದೊರೆಯಬೇಕೆಂಬ ಅದಮ್ಯ ಆಸಕ್ತಿ ಇತ್ತು. ಬರವಣಿಗೆಗೆ ಹೆಚ್ಚು ಪೋತ್ಸಾಹ ನೀಡುತ್ತಿದ್ದರು. ಕುವೆಂಪು ಅವರನ್ನು ದೇಶದಾದ್ಯಂತ ಮೆರವಣಿಗೆ ಮಾಡಿದವರು ದೇಜಗೌ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್, ನಿವೃತ್ತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ, ಸಾಹಿತಿ ಡಾ.ಲತಾ ರಾಜಶೇಖರ್, ವೈದ್ಯ ಡಾ.ರಾಜಶೇಖರ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ರಂಗ ಕಲಾವಿದ ರಾಜಶೇಖರ ಕದಂಬ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಚಂದ್ರಶೇಖರ್, ಲೇಖಕ ಸತೀಶ್ ಜವರೇಗೌಡ, ಜಯಪ್ಪ ಹೊನ್ನಾಳಿ, ಪತ್ರಕರ್ತ ರಂಗನಾಥ ಮೈಸೂರು, ಮೂಗೂರು ನಂಜುಂಡಸ್ವಾಮಿ ಇತರರಿದ್ದರು.