ಶ್ರೀರಂಗಪಟ್ಟಣ: ಕ್ಷೇತ್ರದ ಜನರ ಪ್ರೀತಿಯೊಂದಿಗೆ ಸದಾ ಕಾಲ ನಾನು ನಿಮ್ಮ ಮನೆ ಮಗನಾಗಿ ಜತೆಯಾಗಿದ್ದು ನಿಮ್ಮೆಲ್ಲರ ಸೇವೆಯಲ್ಲಿ ತೊಡಗುವೆ ಎಂದು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಭಾನುವಾರ ಗೌರಿ-ಗಣೇಶ ಹಬ್ಬ ಹಾಗೂ ರಕ್ಷಾ ಬಂಧನ ಪ್ರಯುಕ್ತ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಕ್ಷೇತ್ರದ ನೂರಾರು ಹೆಣ್ಣು ಮಕ್ಕಳಿಗೆ ಬಾಗಿನ ವಿತರಿಸಿ ಜತೆಗೆ ನೆರೆದಿದ್ದ ಎಲ್ಲ ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡು ಮಾತನಾಡಿದರು.
ಕ್ಷೇತ್ರದಲ್ಲಿ ರಾಜಕೀಯ ಹೊರತುಪಡಿಸಿ ಇಂದಿಗೂ ಎಲ್ಲ ಜಾತಿ, ವರ್ಗದ ತಾರತಮ್ಯ ಇಲ್ಲದೆ ನಮ್ಮ ಜನರು ತಮ್ಮ ಮನೆ ಮಗನಂತೆ ತೋರುತ್ತಿರುವ ಪ್ರೀತಿ, ಅಭಿಮಾನಕ್ಕೆ ನಾನು ಎಂದಿಗೂ ಕೃತಜ್ಞ. ನನಗೆ ಯಾವ ಅಕಾರ ಇರಲಿ, ಇಲ್ಲದಿರಲಿ ಎಂದಿಗೂ ನಿಮಗೆ ಪ್ರೀತಿ ತೋರಿ ಬೆಂಬಲಿಸುವ, ಜನರ ಪರ ನಿಲ್ಲುವ ಮನಸ್ಸು ನನಗಿದ್ದು ಅದನ್ನು ಎಂದಿಗೂ ಉಳಿಸಿಕೊಳ್ಳುವೆ ಎಂದು ನೆರೆದಿದ್ದವರಿಗೆ ಧನ್ಯತೆ ಅರ್ಪಿಸಿದರು.
ಪುರಸಭಾ ಸದಸ್ಯರಾದ ಗಂಜಾಂ ಶಿವು, ಎಸ್.ಟಿ.ರಾಜು, ಮಾಜಿ ಸದಸ್ಯ ಪುಟ್ಟರಾಮು, ಮುಖಂಡರಾದ ಶಾಮಿಯಾನ ಪುಟ್ಟರಾಜು, ಮುಖಂಡರಾದ ಪ್ರಭಾಕರ್ ಗುಪ್ತ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾನಸಾ, ಜಯಲಕ್ಷ್ಮೀ, ಪಾಲಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ರೇಖಾ ಉಪಸ್ಥಿತರಿದ್ದರು.