ಜಿಲ್ಲೆ

ಅಭಿವೃದ್ಧಿಗೆ ಕೇಂದ್ರ ಬಜೆಟ್ ಸಹಕಾರಿ : ಡಾ.ಎಲ್.ಎಚ್.ಮಂಜುನಾಥ್ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಕೇಂದ್ರದ ಈ ಬಾರಿಯ ಬಜೆಟ್ ಹಲವು ಕ್ಷೇತ್ರಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಆದರೆ ಭಾರತ 2047ರ ವೇಳೆಗೆ ವಿಕಸಿತ ಭಾರತವಾಗಿ ಬದಲಾಗಿ ಜಾಗತಿಕ ನಾಯಕನಾಗಲು ಜಿಡಿಪಿ ಬೆಳವಣಿಗೆ ದರ ಶೇ.6.7ರಿಂದ 7ರಷ್ಟು ಸಾಲುವುದಿಲ್ಲ. ಈ ದೃಷ್ಟಿಯನ್ನು ಸಾಧಿಸಬೇಕಾದರೆ, ಶೇ.12ದಿಂದ 14ರವರೆಗಿನ ಜಿಡಿಪಿ ಬೆಳವಣಿಗೆ ಅಗತ್ಯ. ಇದು ಪ್ರಸ್ತುತ ಬಜೆಟ್‌ನಿಂದ ಸಾಧ್ಯವಿಲ್ಲ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಎಸ್‌ಕೆಡಿಆರ್‌ಡಿಪಿ) ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಹೇಳಿದರು.

ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಕೇಂದ್ರ ಬಜೆಟ್- 2025ರ ಕುರಿತು ಚರ್ಚಾಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಸ್ವ-ಸಹಾಯ ಗುಂಪು ಆಂದೋಲನವನ್ನು ಬಲಪಡಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಮಹತ್ವದ್ದಾಗಿದೆ. 2001ರಲ್ಲಿ ಪ್ರಾರಂಭವಾದ ಸಂಸ್ಥೆಯಲ್ಲಿ 6.5 ಲಕ್ಷ ಸ್ವ-ಸಹಾಯ ಗುಂಪುಗಳಿದ್ದು, 60 ಲಕ್ಷ ಕುಟುಂಬ ಯೋಜನೆ ಪ್ರಯೋಜನ ಪಡೆಯುತ್ತಿವೆ ಎಂದರು.

ಚರ್ಚಾಗೋಷ್ಠಿಯಲ್ಲಿ ಮೂಲ ಸೌಕರ್ಯ ಹಾಗೂ ಸರಕು ಸಾಗಾಟ ಕ್ಷೇತ್ರಕ್ಕೆ 2025ರ ಬಜೆಟ್ ಕೊಡುಗೆಗಳ ಬಗ್ಗೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಪ್ರಾಧ್ಯಾಪಕ ಡಾ.ಜ್ಞಾನೇಶ್ವರ್, ನಿವೃತ್ತ ಐಆರ್‌ಎಸ್ ಅಧಿಕಾರಿ ಡಿ.ಬಿ.ಮೆಹ್ತಾ, ಲೆಕ್ಕ ಪರಿಶೋಧಕ ನವೀನ್ ನಾರಾಯಣ್ ವಿಚಾರ ಮಂಡಿಸಿದರು. ಸ್ಟಾರ್ಟ್ ಅಪ್ ಹಾಗೂ ಸಣ್ಣ ಕೈಗಾರಿಕೋದ್ಯಮಗಳಿಗೆ ಬಜೆಟ್ ಸಹಾಯಕವಾಗಲಿದೆಯೇ ಎನ್ನುವುದರ ಕುರಿತು ಅರ್ಥಶಾಸ್ತ್ರಜ್ಞ ಡಾ.ಜಿ.ವಿ.ಜೋಶಿ, ಜೆ.ವಿ.ಸ್ಪಿಂಗ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ಆತ್ಮಿಕಾ ಅಮೀನ್, ಉದ್ಯಮಿ ನಿವೇದನ್ ನಿಂಫೆ ಚರ್ಚಿಸಿದರು.

ಅಮೃತಕಾಲದಿಂದ ವಿಕಸಿತ ಭಾರತದವರೆಗಿನ ಭಾರತದ ಭವಿಷ್ಯಕ್ಕೆ ಬಜೆಟ್ ಕೊಡುಗೆಯ ಕುರಿತು ಮಂಗಳೂರಿನ ಐಸಿಎಐ ಮಾಜಿ ಅಧ್ಯಕ್ಷ ಎಸ್.ಎಸ್.ನಾಯಕ್, ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕ ಡಾ.ಟಿ.ಮಲ್ಲಿಕಾರ್ಜುನ್ ಹಾಗೂ ಸಂಸ್ಥೆ ಪ್ರಾಧ್ಯಾಪಕ ಡಾ.ವಿಷ್ಣು ಪ್ರಸನ್ನ ಚರ್ಚಾಗೋಷ್ಠಿ ನಡೆಸಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಉಪಸ್ಥಿತರಿದ್ದರು.

ಶಿಕ್ಷಣ ಮತ್ತು ಆರೋಗ್ಯದ ಮೇಲೆ ಸರ್ಕಾರದ ಗಮನಾರ್ಹ ವ್ಯಯದ ಹೊರತಾಗಿಯೂ ಅಧಿಕಾರಶಾಹಿ ವ್ಯವಸ್ಥೆಯಲ್ಲಿನ ಅಸಮರ್ಥತೆಯಿಂದಾಗಿ ಅಗತ್ಯವಿರುವವರಿಗೆ ಅದರ ಪ್ರಯೋಜನ ತಲುಪಲು ವಿಫಲವಾಗುತ್ತಿದೆ. ಪರಿಣಾಮಕಾರಿ ಆಡಳಿತಕ್ಕೆ ದೃಢವಾದ ಮತ್ತು ಸ್ಪಂದಿಸುವ ಅಧಿಕಾರಶಾಹಿ ವರ್ಗದ ಅಗತ್ಯವಿದೆ. ಡಾ.ಎಲ್.ಎಚ್.ಮಂಜುನಾಥ್ ಎಸ್‌ಕೆಡಿಆರ್‌ಡಿಪಿ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ
ಮಹಾಕುಂಭ ಮೇಳಕ್ಕೆ ಉತ್ತರ ಪ್ರದೇಶ 3,700 ಕೋಟಿ ರೂ. ಖರ್ಚು ಮಾಡಿತು. ಪ್ರತಿಯಾಗಿ ರಾಜ್ಯ 25,000 ಕೋಟಿ ರೂ.ಗಳ ನೇರ ಲಾಭ ಗಳಿಸಿತು. ಇದರಿಂದಾಗಿ ಇಡೀ ದೇಶ 3 ಲಕ್ಷ ಕೋಟಿಗಳಷ್ಟು ಲಾಭ ಗಳಿಸಿದೆ. ಆದರೆ ಸಾಮಾಜಿಕ ಮಾಧ್ಯಮ ಇಂಥ ವಿಚಾರವನ್ನು ಹೆಚ್ಚು ಪ್ರಚಾರಗೊಳಿಸದೆ ಬೆಕ್ಕಿನ ಕಣ್ಣಿನ ಮೊನಾಲಿಸಾ, ಐಐಟಿ ಬಾಬಾ ಮುಂತಾದ ಹ್ಯಾಶ್ ಟ್ಯಾಗ್ ಮೂಲಕ ಅನಗತ್ಯ ಪ್ರಚಾರ ಮಾಡಿವೆ. ವಿವೇಕ್ ಆಳ್ವ, ಆಳ್ವಾಸ್ ಟ್ರಸ್ಟಿ