ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸೌಹಾರ್ದವಿಲ್ಲದೆ ಬದುಕಿಗೆ ಅರ್ಥವಿಲ್ಲ. ಪ್ರೀತಿ ಸೌಹಾರ್ದಕ್ಕಾಗಿ ನಾವು ಜೀವನದುದ್ದಕ್ಕೂ ಶ್ರಮಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
30ನೇ ಆಳ್ವಾಸ್ ವಿರಾಸಾತ್ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್-ರೇಂಜರ್ಸ್ ಸಾಂಸ್ಕೃತಿಕ ಉತ್ಸವದ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಬುಧವಾರ ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಜಾನಪದ ಕಲೆಗಳ ವೈವಿಧ್ಯತೆ ಅಪ್ಪಿಕೊಳ್ಳಬೇಕು. ದೇಶದ ಕಲೆಯನ್ನು ಪ್ರೀತಿಸಬೇಕು. ಶುಚಿತ್ವ ಬಿಟ್ಟರೆ ಬದುಕೇ ಇಲ್ಲ. ಶುಚಿತ್ವ ಕೇವಲ ಮಾತಿಗೆ, ಬರಹಕ್ಕೆ ಮೀಸಲಾಗಬಾರದು. ನಮ್ಮ ಜೀವನದಲ್ಲಿ ಅಂತರ್ಗತವಾಗಬೇಕು. ಜತೆಗೆ ಮಣ್ಣು, ಗಾಳಿ, ನೀರು, ಆಕಾಶವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಮಾನವ ಕುಲದ ಉಳಿವಿಗೆ ಪರಿಸರದ ರಕ್ಷಣೆ ಬಹುಮುಖ್ಯ. ಮಾನವ ಧರ್ಮ ಹೊರತುಪಡಿಸಿ ಜಗತ್ತಿನಲ್ಲಿ ಯಾವುದೇ ಧರ್ಮವಿಲ್ಲ. ಧರ್ಮವೊಂದೇ, ಮತಗಳು ಹಲವಾರು ಎಲ್ಲ ಮತಗಳು ಸೇರಿ ಇರುವುದೇ ಧರ್ಮ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದೇಶಕ್ಕೆ ಮಾದರಿಯಾಗುವಂತೆ ಬೆಳೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ವ ಪರಿಪೂರ್ಣತೆ ಮೂಡಿಸುವ ಕೆಲಸ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ ಎಂದರು.
ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ ಭಟ್, ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ನವೀನಚಂದ್ರ ಅಂಬೂರಿ, ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜು ರೇಂಜರ್ಸ್ ನಾಯಕಿ ಶ್ವೇತಾಶ್ರೀ ಕಾರ್ಯಕ್ರಮ ನಿರೂಪಿಸಿದರು.
ಆಳ್ವಾಸ್ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪ್ರತಿಯೊಬ್ಬರೂ ವಿರಾಸತ್ ಮೇಳವನ್ನು ಸೂಕ್ಷತೆಯಿಂದ ಗಮನಿಸಿ ಪ್ರೇರಿತರಾಗಬೇಕು. ಪಿ.ಜಿ.ಆರ್.ಸಿಂಧ್ಯಾ, ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್