ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕೃಷಿಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ 2ನೇ ವರ್ಷದ
‘ಸಮೃದ್ಧಿ’ ಹಲಸು, ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ, ಕೃಷಿ ಪರಿಕರ ಹಾಗೂ ಕರಕುಶಲ ವಸ್ತುಗಳ ಸಂಗ್ರಹ ಮತ್ತು ಮಾರಾಟ ಮೇಳವನ್ನು ಜೂ. 14ರಿಂದ 16ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ.
ಈ ಮಹಾವೇಳದಲ್ಲಿ ವಿವಿಧ ರಾಜ್ಯಗಳ 300ಕ್ಕೂ ಅಧಿಕ ಮಳಿಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ತೆರೆದುಕೊಳ್ಳಲಿವೆ .ಜೂ. 14ರಂದು ಬೆಳಗ್ಗೆ 10ಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮ ಮುನ್ನೋಟ ಭಾಷಣ ಮಾಡಲಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಹಿತ ವಿವಿಧ ಗಣ್ಯರು
ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವದೇಶಿ ವಸ್ತುಗಳ ಮಳಿಗೆಗಳು :
ಮೇಳದ ವಿಶೇಷ ಆಕರ್ಷಣೆಯಾಗಿ ಬೆಂಗಾಲಿ, ಆಂಧ್ರ, ಜಮ್ಮು, ಲಕ್ನೊ, ಬಗಲ್‌ಪುರ, ಗುಜರಾತ್, ಪಂಜಾಬ್, ರಾಜಸ್ತಾನ, ಸೂರತ್ ಹಾಗೂ ಬಿಹಾರ್ ರಾಜ್ಯಗಳ ಕೈಮಗ್ಗದ ಉಡುಪುಗಳು, ಕಾಟನ್ ಸಿಲ್ಕ್ ಸೀರೆಗಳು, ಸಿದ್ಧ ಉಡುಪುಗಳು, ಒಡಿಶಾ ಹಾಗೂ ಜೈಪುರದ ಬುಡಕಟ್ಟು ಜನಾಂಗಗಳ ಆಭರಣಗಳು, ಕೈಯಿಂದಲೇ ತಯಾರಿಸಿದ ಬಳೆಗಳು, ಪುರಾತನ ಹಿತ್ತಾಳೆ ಕಲಾಕೃತಿಗಳು, ಮರದ ಚೌಕಟ್ಟಿನ ಹಿತ್ತಾಳೆ ಕಲಾಕೃತಿಗಳು, ಸಮುದ್ರ ಚಿಪ್ಪಿನ ಆಭರಣಗಳು, ಕೈಯಿಂದ ತಯಾರಿಸಿದ ಮರದ ಕರಕುಶಲ ವಸ್ತುಗಳು, ಮರದ ಆಟಿಕೆಗಳು, ಚನ್ನಪಟ್ಟಣದ ಆಟಿಕೆಗಳು, ಅಮೃತಶಿಲೆಯ ವಸ್ತುಗಳು, ಬಿದಿರಿನ ಕೈ ಚೀಲಗಳ ಉತ್ತರ ಭಾರತದ ಮಳಿಗೆಗಳು ಮೇಳದಲ್ಲಿ ಇರಲಿವೆ ಎಂದು ಅವರು ವಿವರಿಸಿದರು.
*ಹಲಸಿನ ವಿವಿಧ ತಳಿಗಳ ಪ್ರದರ್ಶನ
ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯಮಯ ಹಲಸಿನ ತಳಿಗಳ ಸಂಗ್ರಹ ಹಾಗೂ ಪ್ರದರ್ಶನ , ಜತೆಗೆ ಮಾವು, ಪಪ್ಪಾಯ, ಅನಾನಸು, ಪೇರಳೆ, ಕಲ್ಲಂಗಡಿ, ನೇರಳೆಯಂತಹ ದೇಶಿಯ ಹಣ್ಣುಗಳು, ತರಕಾರಿಗಳು ಮತ್ತು ರಂಬುಟನ್, ಮ್ಯಾಂಗೋಸ್ಟಿನ್, ಡ್ರ್ಯಾಗನ್ ಫ್ರುಟ್, ಬಟರ್ ಫ್ರುಟ್‌ನಂತಹ ವಿದೇಶಿ ಹಣ್ಣಿನ ತಳಿಗಳ ಸಂಗ್ರಹ ಇರಲಿದೆ. ಕಲ್ಲಂಗಡಿ, ಕಬ್ಬು, ತಾಜಾ ಹಣ್ಣುಗಳ ಸವಿರಸ, ಹಣ್ಣು-ತರಕಾರಿಗಳಿಂದ ತಯಾರಾದ ಸಿದ್ಧ ತಿನಿಸುಗಳ ಸಂಗ್ರಹವೂ ಇರಲಿದೆ. ಆಹಾರೋತ್ಸವದಲ್ಲಿ ಹಣ್ಣು ತರಕಾರಿಗಳಿಂದಲೇ ವಿಶೇಷವಾಗಿ ತಯಾರಿಸಿದ ಖಾದ್ಯಗಳು, ವಿವಿಧ ಸಮುದಾಯಗಳ ಪ್ರಾದೇಶಿಕ ತಿನಿಸುಗಳ ಮಾರಾಟ, ಹಲಸಿನಿಂದ ತಯಾರಿಸಲ್ಪಡುವ ವಿವಿಧ ಆಹಾರ ಉತ್ಪನ್ನಗಳು ಹಾಗೂ ಕರಾವಳಿಯುಳೆಗಾಲದ ವಿಶೇಷ ತಿನಿಸುಗಳು ವಿವಿಧ ಮಳಿಗೆಗಳಲ್ಲಿ ಲಭ್ಯವಾಗಲಿವೆ ಎಂದು ಡಾ. ಮೋಹನ್ ಆಳ್ವ ತಿಳಿಸಿದರು.
ಕೃಷಿ ವಸ್ತುಗಳ ಮಾರಾಟ
ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಿವಿಧ ಕೃಷಿ ಉಪಕರಣಗಳು, ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ, ವಿವಿಧಜಾತಿಯ ಫಲಪುಷ್ಪಗಳ ಸಸ್ಯಗಳ ನರ್ಸರಿ, ಬಿತ್ತನೆಗೆ ಯೋಗ್ಯವಾದ ಬೀಜಗಳು, ನವವಿಧ ಸಿರಿಧಾನ್ಯಗಳ ಬೃಹತ್ ಸಂಗ್ರಹ ಇರಲಿವೆ. ಆಲಂಕಾರಿಕ ವಸ್ತುಗಳು, ಮಣ್ಣಿನ ಮಡಕೆಗಳು, ಗೃಹೋಪಯೋಗಿ ವಸ್ತುಗಳ ಬೃಹತ್ ಮೇಳ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಆಹಾರ ಮತ್ತು ಪೋಷಕಾಂಶಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಬಲೀಕರಣ ಫಲಾನುಭವಿಗಳ ಸಿರಿ ಸ್ವದೇಶಿ ಉತ್ಪನ್ನಗಳ ಬೃಹತ್ ಸಂಗ್ರಹ ಇರಲಿದೆ ಎಂದು ಅವರು ವಿವರ ನೀಡಿದರು.
ಸಮೃದ್ಧಿ ಮಹಾಮೇಳ ಸಮಿತಿಯ ಸಂಯೋಜಕರಾದ ಡಾ. ಶಶಿಕುಮಾರ, ಸದಸ್ಯರಾದ ರಾಜವರ್ಮ ಬೈಲಂಗಡಿ, ಪ್ರಸಾದ ಶೆಟ್ಟಿ, ದೀಪಕ ಕೊಳಕೆ ಉಪಸ್ಥಿತರಿದ್ದರು.
* ರೀಲ್ಸ್ ಸ್ಪರ್ಧೆ
ಮಹಾಮೇಳದ ಮೊದಲ ದಿನ ರೀಲ್ಸ್ ತಯಾರಕರು ಆಕರ್ಷಕ ಹಾಗೂ ಗುಣಾತ್ಮಕ ರೀಲ್ಸ್ ತಯಾರಿಸಿ, ತಮ್ಮ ಖಾತೆಗಳಲ್ಲಿ ಪ್ರಸಾರ ಮಾಡಿ, (ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್) ಹೆಚ್ಚು ವೀಕ್ಷಣೆಗೊಳಪಡುವ ರೀಲ್ಸ್‌ಗಳಿಗೆ ಪ್ರಥಮ 10 ಸಾವಿರ ರೂ.ಹಾಗೂ ದ್ವಿತೀಯ 5 ಸಾವಿರ ರೂ.ಗೆಲ್ಲುವ ಅವಕಾಶವಿದೆ. ಹೆಚ್ಚಿನ ವಿವರಗಳಿಗೆ 9164322329 ಸಂಪರ್ಕಿಸಬಹುದು.
*ಸಾರ್ವಜನಿಕರಿಗೆ ಉಚಿತ ಪ್ರವೇಶ
*ಮೇಳ ಬೆಳಗ್ಗೆ 9ರಿಂದ ರಾತ್ರಿ 9 ರವರೆಗೆ.
*ವಾಹನ ನಿಲುಗಡೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ .
*ಮಳೆಯಿಂದ ತೊಂದರೆಯಾಗದಂತೆ ಶಾಶ್ವತ ಚಪ್ಪರದ ವ್ಯವಸ್ಥೆ.
* ಮಳಿಗೆಗಳನ್ನು ತೆರೆಯಲು ಆಸಕ್ತಿ ಉಳ್ಳವರು 9113019074 8197025728. ಸಂಪರ್ಕಿಸಬಹುದು.
......................