ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಮಲೇಷಿಯಾದ ಮಿಲಾ ವಿಶ್ವವಿದ್ಯಾಲಯದ ನಡುವೆ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಶೈಕ್ಷಣಿಕ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಮಿಲಾ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಡಾ.ದೀಪಕ್ ತಿರುಮಿಶಿ ಜಡಾ ಮತ್ತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಒಪ್ಪಂದಕ್ಕೆ ಸಹಿ ಹಾಕಿದರು.
ವರ್ಚುವಲ್ ಸಭೆಯಲ್ಲಿ ಎರಡು ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಮಿಲಾ ವಿಶ್ವವಿದ್ಯಾಲಯದ ಕುಲಪತಿ ಡಾ. ಜೇಸನ್ ಫಿಟ್ಸಿಮನ್ಸ್, ಸಂಶೋಧನೆ ಮತ್ತು ಉದ್ಯಮಶೀಲತೆ ವಿಭಾಗದ ಉಪಕುಲಪತಿ ಪ್ರೊ.ಗ್ರಾಹಮ್ ಕೆಂಡಲ್, ಅಕಾಡೆಮಿಕ್ ವ್ಯವಹಾರಗಳ ಉಪಕುಲಪತಿ ಪ್ರೊ.ಲೀ ಚ್ಯೂ ಗಿಂಗ್ ಹಾಗೂ ಸಂಶೋಧನೆ ವಿಭಾಗದ ಸಹಾಯಕ ಉಪಕುಲಪತಿ ವಾಂಗ್ ಸಿಯೋ ಫಾಂಗ್ ಭಾಗವಹಿಸಿದ್ದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಸುರೇಶ್, ಪರೀಕ್ಷಾ ಕುಲಸಚಿವ ಡಾ.ಶಶಿಕಾಂತ ಕರಿಂಕಾ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.
ಡಾ.ಜೇಸನ್ ಫಿಟ್ಸಿಮನ್ಸ್ ಹಾಗೂ ಡಾ.ಪೀಟರ್ ಫರ್ನಾಂಡಿಸ್ ಜಂಟಿ ಸಂಶೋಧನಾ ಯೋಜನೆಗಳ ಅನುಷ್ಠಾನ ಹಾಗೂ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಅವಕಾಶಗಳ ಅನುಷ್ಠಾನಕ್ಕೆ ಆದ್ಯತೆ ನೀಡಲು ಸಹಮತ ವ್ಯಕ್ತಪಡಿಸಿದರು.
ಈ ಒಪ್ಪಂದದ ಮೂಲಕ ವಿದ್ಯಾರ್ಥಿ ಮತ್ತು ಬೋಧಕ ವರ್ಗದ ವಿನಿಮಯ ಕಾರ್ಯಕ್ರಮಗಳು, ಜಂಟಿ ಸಂಶೋಧನಾ ಯೋಜನೆಗಳು, ಇಂಟರ್ನ್‌ಶಿಪ್ ಹಾಗೂ ತರಬೇತಿ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಹಯೋಗದ ಕಾರ್ಯಕ್ರಮ, ಸಾಂಸ್ಕೃತಿಕ ವಿನಿಮಯದಂತಹ ಹಲವಾರು ಉಪಯುಕ್ತ ಅವಕಾಶಗಳನ್ನು ಪಡೆಯಲು ಅವಕಾಶ ಲಭಿಸಲಿದೆ.