ಜಿಲ್ಲೆ

ಆಳ್ವಾಸ್- ಕುಮಮೊಟೊ ವಿವಿ ಶೈಕ್ಷಣಿಕ ಒಡಂಬಡಿಕೆ ನವೀಕರಣ

Dakshina Kannada

ಮೂಡುಬಿದಿರೆ: ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆಧುನಿಕ ಅಗತ್ಯತೆ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಿರೀಕ್ಷೆಗೆ ತಕ್ಕಂತಹ ಗುಣಮಟ್ಟದ ಬದಲಾವಣೆ ತರುವ ನಿಟ್ಟಿನಲ್ಲಿ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ಜಪಾನಿನ ಕುಮಮೊಟೊ ವಿಶ್ವವಿದ್ಯಾಲಯದ ನಡುವೆ ಈ ಹಿಂದೆ ಸಹಿ ಹಾಕಿಲಾಗಿದ್ದ ಮಹತ್ವದ ಶೈಕ್ಷಣಿಕ ಒಪ್ಪಂದವನ್ನು ನವೀಕರಿಸಲಾಯಿತು.

ಕುಮಮೊಟೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಅಡ್ವಾನ್ಸ್‌ಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಡೀನ್ ತ್ಸುರೆಕಾವ ಸದಹಿರೊ ಹಾಗೂ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಒಡಂಬಡಿಕೆಗೆ ಸಹಿಹಾಕಿದರು.

ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಉನ್ನತ ಅಧ್ಯಯನಕ್ಕೆ ಅವಕಾಶ ಕಲ್ಪಿಸುವುದು, ಹೊಸ ಆವಿಷ್ಕಾರಗಳ ಮೂಲಕ ಸಂಶೋಧನೆಗೆ ನೆರವಾಗುವುದು, ಸಂಶೋಧನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕುಮಮೊಟೊ ವಿಶ್ವವಿದ್ಯಾಲಯದಿಂದ ಸ್ಕಾಲರ್‌ಶಿಪ್ ಸೌಲಭ್ಯ, ಎರಡೂ ಸಂಸ್ಥೆಗಳು ಜಂಟಿಯಾಗಿ ತಾಂತ್ರಿಕ ಸಮ್ಮೇಳನಗಳನ್ನು ನಡೆಸುವುದು ಹಾಗೂ ವಿದ್ಯಾರ್ಥಿಗಳ ಕಲಿಕಾ ಮತ್ತು ಪ್ರಾಧ್ಯಾಪಕರ ಬೋಧನಾ ಗುಣಮಟ್ಟ ಹೆಚ್ಚಿಸಲು ಕಾರ್ಯಾಗಾರ ಏರ್ಪಡಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ.