ಜಿಲ್ಲೆ

ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸ್ವಾಯತ್ತ ಸ್ಥಾನಮಾನ ಬಳಕೆ : ಡಾ.ಕುರಿಯನ್ ಮಾಹಿತಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿ

ಸೌಮ್ಯ ಆರ್

ಮೂಡುಬಿದಿರೆ: ಕಾಲೇಜುಗಳ ಸ್ವಾಯತ್ತ ಸ್ಥಾನಮಾನ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜು ವಿಶಿಷ್ಟವಾಗಿ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪಠ್ಯಕ್ರಮ, ಉದ್ಯಮ ಹಾಗೂ ಕೌಶಲ ಆಧಾರಿತವಾಗಿ ವಿದ್ಯಾರ್ಥಿ ಹಾಗೂ ಸಮುದಾಯಿಕ ಅವಶ್ಯಕತೆಗೆ ತಕ್ಕಂತೆ ಅನುಷ್ಠಾನಗೊಳಿಸುತ್ತಿದೆ ಎಂದು ಆಳ್ವಾಸ್(ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಹುಶಿಸ್ತೀಯ ಅಧ್ಯಯನ ಹೊಂದಿದ ಕಾಲೇಜುಗಳಿಗೆ ಸರ್ಕಾರ ಸ್ವಾಯತ್ತ ಸ್ಥಾನಮಾನ ನೀಡುತ್ತಿದೆ.‘ಸ್ವಾಯತ್ತ’ ಎಂದರೆ ಕೇವಲ ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ಬದಲಾವಣೆ ಅಲ್ಲ, ಅದು ಪಠ್ಯಕ್ರಮ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಎಂದರು.

ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಶೈಕ್ಷಣಿಕ ಪಠ್ಯಕ್ರಮ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ. ಪದವಿ ಜತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ನೇರವಾಗಿ ಸಿದ್ಧರಾಗುತ್ತಾರೆ. ವಿದ್ಯಾರ್ಥಿಗಳ ಸೈದ್ಧಾಂತಿಕ (ಥಿಯರಿ) ಕಲಿಕೆ ಜತೆ ಪ್ರಾಯೋಗಿಕ ಕಲಿಕೆ ಹೆಚ್ಚಾಗಿದೆ. ಅಂತರ್‌ಶಿಸ್ತೀಯ ಅಧ್ಯಯನದ ಮೂಲಕ ಅನ್ವಯಿಕವಾಗಿ ಕಲಿಯುವ ಕಾರಣ ಮಾರುಕಟ್ಟೆಯಲ್ಲಿ ಔದ್ಯಮಿಕ ಹಾಗೂ ಔದ್ಯೋಗಿಕ ಅವಕಾಶ ಹೆಚ್ಚಲಿದೆ. ಶೈಕ್ಷಣಿಕ ವೇಳಾಪಟ್ಟಿ (ಕ್ಯಾಲೆಂಡರ್), ಅತ್ಯಾಧುನಿಕ ಮಾದರಿಯ ಪರೀಕ್ಷಾ ವಿಧಾನ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪಷ್ಟತೆ ತರುತ್ತದೆ. ಆಗ ಅತ್ಯುತ್ತಮ ಶಿಕ್ಷಣ ದೊರೆಯುತ್ತದೆ. ಅದು ನಮ್ಮ ಆದ್ಯತೆ ಎಂದರು.

ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆಯಲ್ಲಿ ಆಳ್ವಾಸ್ ಈಗಾಗಲೇ ಸಾಧನೆ ಮಾಡಿದೆ. ಅವುಗಳನ್ನು ಪಠ್ಯಕ್ರಮದ ಜತೆ ಜೋಡಿಸಿದ್ದು, ಸರ್ಟಿಫಿಕೇಟ್ ಕೋರ್ಸ್ ಪರಿಚಯಿಸಲಾಗಿದೆ. ಅವುಗಳ ಜತೆ ‘ಕಲಿಕೆ- ಗಳಿಕೆ’ ಕಾರ್ಯಕ್ರಮ ಜಾರಿಗೊಳಿಸಿದ್ದು, ಇನ್ಫೋಸಿಸ್, ಸ್ಟ್ರೈಕಾನ್ ಮತ್ತಿತರ ಕಂಪನಿಗಳಲ್ಲಿ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬಹುದಾಗಿದೆ. ಉದ್ಯೋಗ ಪಡೆಯಲು ಬೇಕಾದ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಗುರಿ ಈಡೇರಿಕೆಗೆ ಅನುಗುಣವಾಗಿ ಪದವಿ ಆಯ್ಕೆ ಮಾಡುವ ವಿಧಾನ ನಮ್ಮದಾಗಿದೆ. ಅಂತಾರಾಷ್ಟ್ರೀಯ ಬೇಡಿಕೆಯಿಂದ ಹಿಡಿದು ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಸ್ವಾಯತ್ತ ಕಾಲೇಜು ಶೈಕ್ಷಣಿಕ ವ್ಯವಸ್ಥೆ ರೂಪಿಸಬಹುದಾಗಿದ್ದು, ಆಳ್ವಾಸ್ ಈ ನಿಟ್ಟಿನಲ್ಲಿ ಹೆಜ್ಜೆ ಇಡಬಹುದಾಗಿದೆ ಎಂದರು.

ಪ್ರಮುಖ ಅಂಶಗಳು

  • ಸ್ವಾಯತ್ತ ಮಾನ್ಯತೆ ಈಗಾಗಲೇ ಪಡೆದುಕೊಂಡಿದ್ದು, 2025-26ನೇ ಸಾಲಿನಿಂದ ಸಂಪೂರ್ಣವಾಗಿ ಕಾರ್ಯಪ್ರವೃತ್ತ ಗೊಳ್ಳಲಿದೆ. ಈ ನಿಟ್ಟಿನಲ್ಲಿ ಹೊಸ ಪಠ್ಯಕ್ರಮ, ಉದ್ಯಮ ಹಾಗೂ ಕೌಶಲ ಆಧಾರಿಸ ಕೋರ್ಸ್‌ನ್ನು ಪರಿಚಯಿಸಲಾಗಿದೆ.
  • ಆಳ್ವಾಸ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಸಿಎ, ಸಿಎಸ್, ಎಸಿಸಿಎ, ಸಿಎಂಎ, ಸಿಪಿಎ ಜತೆಗೆ ಸಂಯೋಜಿತವಾಗಿ ಪಡೆದುಕೊಳ್ಳಬಹುದು. ಇದರೊಂದಿಗೆ ಕಂಪ್ಯೂಟರ್ ಅಪ್ಲಿಕೇಶನ್, ಟ್ಯಾಕ್ಸ್ ಪ್ರೊಸಿಜರ್, ಬ್ಯಾಂಕಿಂಗ್ ಹಾಗೂ ಇನ್ಶೂರೆನ್ಸ್, ಅಕೌಂಟ್ಸ್ ಹಾಗೂ ಫೈನಾನ್ಸ್, ಬ್ಯುಸಿನೆಸ್ ಡೇಟಾ ಅನಾಲಿಟಿಕ್ಸ್‌ನಲ್ಲೂ ಬಿಕಾಂ ಪದವಿ ಪಡೆಯಲು ಅವಕಾಶವಿದೆ.
  • ಬಿಸಿಎ ವಿಭಾಗದಲ್ಲಿ ಹೊಸದಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಮಷಿನ್ ಲರ್ನಿಂಗ್, ಡೇಟಾ ಸೈನ್ಸ್ ಕೋರ್ಸ್‌ನ್ನು ಪರಿಚಯಿಸಲಾಗಿದೆ. ಪದವಿ ಬಳಿಕ ಉದ್ಯೋಗ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಉದ್ಯೋಗಾಧಾರಿತ ಕೋರ್ಸ್‌ಗಳಾದ ಫುಡ್ ಆ್ಯಂಡ್ ನ್ಯೂಟ್ರಿಷನ್, ಆನಿಮೇಷನ್, ಹೋಟೆಲ್ ಮ್ಯಾನೇಜ್‌ಮೆಂಟ್, ಫ್ಯಾಷನ್ ಡಿಸೈನಿಂಗ್, ಜರ್ನಲಿಸಂ, ಎವಿಯೇಷನ್‌ನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಪ್ರತಿ ಕೋರ್ಸ್‌ನ ಸೆಮಿಸ್ಟರ್ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ 30ಕ್ಕೂ ಅಧಿಕ ಘಟಕಗಳಿದ್ದು ಇದಕ್ಕಾಗಿಯೇ ಹೊಸ ಪಠ್ಯಕ್ರಮ ಪರಿಚಯಿಸಿ ಕೊನೆಯಲ್ಲಿ ಪರೀಕ್ಷೆ ನಡೆಸುವ ಮೂಲಕ ಸರ್ಟಿಫಿಕೇಟ್ ನೀಡಲಾಗುವುದು. ಸರ್ಟಿಫಿಕೇಟ್ ಕೋರ್ಸ್‌ಗಳ ಜತೆಗೆ ವಿದ್ಯಾರ್ಥಿಗಳು ಯಕ್ಷಗಾನ, ನಾಟಕ, ಭರತನಾಟ್ಯ, ಸಂಗೀತ ಹಾಗೂ ವಾದ್ಯಗಳಂಥ ಲಲಿತ ಕಲೆ ಕಲಿಯಲು ಅವಕಾಶವಿದೆ.
  • ಸ್ವಾಯತ್ತ ವ್ಯವಸ್ಥೆ ಮೂಲಕ ಕಾಲೇಜಿನಲ್ಲಿ ವಿದ್ಯಾರ್ಥಿಸ್ನೇಹಿ-ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ಸರಳವಾಗಿ ಹಾಗೂ ವೇಗವಾಗಿ ಪರೀಕ್ಷೆ ಫಲಿತಾಂಶ ವಿದ್ಯಾರ್ಥಿಗಳನ್ನು ತಲುಪುತ್ತಿದೆ. ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಗೊಂದಲವಿದ್ದಾಗ ಉತ್ತರ ಪತ್ರಿಕೆಗಳನ್ನು ತಮ್ಮ ಮೊಬೈಲ್‌ಗಳಲ್ಲಿಯೇ ಪರಿಶೀಲಿಸಬಹುದು.