ಜಿಲ್ಲೆ

ಕರ್ನಾಟಕದ ಏಕೀಕರಣಕ್ಕೆ ಆಲೂರು ವೆಂಟಕರಾಯರ ಕೊಡುಗೆ ಅಪಾರ

ಮೈಸೂರು: ಕರ್ನಾಟಕದ ಏಕೀಕರಣಕ್ಕೆ ಆಲೂರು ವೆಂಟಕರಾಯರ ಕೊಡುಗೆ ಅಪಾರವಾಗಿದ್ದು. ನಾಡಿನ ಗತ ವೈಭವದ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ಏಕೀಕರಣದ ಕಿಚ್ಚನ್ನು ಹತ್ತಿಸಿ ಬಡಿದೆಬ್ಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹೇಳಿದರು.

ನಗರದ ಚಾಮುಂಡಿಪುರಂ ವೃತ್ತದ ರಾಮಚಂದ್ರರಾವ್ ಉದ್ಯಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಆಲೂರು ವೆಂಕಟರಾಯರ 144 ನೇ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿ ಮಾತನಾಡಿದರು.

ಏಕೀಕರಣಕ್ಕೂ ಮೊದಲು ಕರ್ನಾಟಕ ರಾಜ್ಯ ಹರಿದು ಹಂಚಿ ಹೋಗಿತ್ತು. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕಗಳಾಗಿ ಬೇರೆಯಾಗಿತ್ತು. ನಮ್ಮ ಪ್ರಾಥಮಿಕ ಶಾಲೆಗಳಲ್ಲೂ ಹೆಚ್ಚಾಗಿ ಮರಾಠಿ ಶಿಕ್ಷಣ ನೀಡಲಾಗುತ್ತಿತ್ತು. ಇದನ್ನು ಮನಗಂಡ ವೆಂಕಟರಾಯರು ಏಕೀಕರಣ ಚಳವಳಿ ನಡೆಸಲು ತಮ್ಮ ಶಾಲಾ ವಿದ್ಯಾರ್ಥಿ ಸಮಯದಲ್ಲೇ ಮುಂದಾಗಿದ್ದರು ಎಂದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ವೆಂಕಟರಾಯರು ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ಕನ್ನಡಿಗರಿಗೆ ಸ್ವ ಉದ್ಯೋಗ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಕರ್ನಾಟಕ ಏಕೀಕರಣ ಪರಿಷತ್ ಮೂಲಕ ಕರ್ನಾಟಕದ ಏಕೀಕರಣ ಮಾಡುವ ಮಹತ್ಕಾರ್ಯ ಮಾಡಿದ್ದರು. ತಮ್ಮ ಬಹುಮುಖ ವ್ಯಕ್ತಿತ್ವದ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆಂದರು.