ಬೆಳಗಾವಿ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಾಚಾರ್ಯೆ ಡಾ.ಜ್ಯೋತಿ ಹಿರೇಮಠ ಮಾತನಾಡಿದರು. ಪ್ರೊ.ಸವಿತಾ ಪಟ್ಟಣಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ರೀಚಾ ರಾವ್ ಇತರರಿದ್ದರು. 
ಜಿಲ್ಲೆ

ಅಲೂಮ್ನಿ ವಾಕಥಾನ್

ಶಂಕರ ಗೆಜ್ಜಿ

ಬೆಳಗಾವಿ: ಕೆಎಲ್ಇ ಸಂಸ್ಥೆಯ ಬಿವಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿ ಸಂಘಟನೆ ಏ.6ರಂದು ಹಮ್ಮಿಕೊಂಡಿರುವ ಅಲೂಮ್ನಿ ವಾಕಥಾನ್ (ಹಳೆಯ ವಿದ್ಯಾರ್ಥಿಗಳ ನಡೆಯುವ ಸ್ಪರ್ಧೆ) ಕಾರ್ಯಕ್ರಮಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಚಾಲನೆ ನೀಡಲಿದ್ದಾರೆ ಎಂದು ಪ್ರಾಚಾರ್ಯೆ ಡಾ.ಜ್ಯೋತಿ ಹಿರೇಮಠ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50 ವರ್ಷದಿಂದ ಬಿವಿ ಬೆಲ್ಲದ ಕಾನೂನು ಮಹಾವಿದ್ಯಾಲಯ ಗುಣಮಟ್ಟದ ಕಾನೂನು ಶಿಕ್ಷಣ ನೀಡುತ್ತಿದ್ದು, ಸುವರ್ಣ ಸಂಭ್ರಮಾಚರಣೆ ನಿಮಿತ್ತ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

1975ರಲ್ಲಿ ಸ್ಥಾಪನೆಯಾದ ಈ ಮಹಾವಿದ್ಯಾಲಯ, ಕೆಎಲ್ಇ ಸಂಸ್ಥೆ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಲಿಂಗರಾಜ ಮಹಾವಿದ್ಯಾಲಯದ ವಿಶಾಲ ಆವರಣದಲ್ಲಿ 3 ಹಾಗೂ 5 ವರ್ಷದ ಕಾನೂನು ಪದವಿ ಕೋರ್ಸ್ ನೀಡುತ್ತ ಬಂದಿದೆ. ಸಮ ಸಮಾಜ ನಿರ್ಮಾಣ, ಗುಣಮಟ್ಟದ ಕಾನೂನು ಶಿಕ್ಷಣ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಈ ಮಹಾವಿದ್ಯಾಲಯ ಕೆಎಲ್ಇ ಸಂಸ್ಥೆಯ ಸಂಜೆ ಕಾನೂನು ಮಹಾವಿದ್ಯಾಲಯ ಹೆಸರಿನಲ್ಲಿ ಪ್ರಸಿದ್ಧವಾಗಿತ್ತು. 1982ರಲ್ಲಿ ಹಿರಿಯ ವಕೀಲ ಹಾಗೂ ಶಿಕ್ಷಣಪ್ರೇಮಿ ಬಿ.ವಿ. ಬೆಲ್ಲದ ಈ ಮಹಾವಿದ್ಯಾಲಯದ ಸ್ಥಾಪನೆಗೆ ಒಂದು ಲಕ್ಷ ರೂಪಾಯಿ ದಾನ ನೀಡಿದ ಹಿನ್ನೆಲೆಯಲ್ಲಿ ಕೆಎಲ್ಇ ಸಂಸ್ಥೆಯು ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ಎಂದು ಹೆಸರಿಸಿ ಕೃತಜ್ಞತೆ ಸಲ್ಲಿಸಿದೆ. 2009-10ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಿಂದ ಶಾಶ್ವತ ಅಂಗೀಕಾರ ಪಡೆದುಕೊಂಡಿದೆ. ದೆಹಲಿಯ ಭಾರತದ ವಕೀಲರ ಪರಿಷತ್ ಅನುಮೋದಿತವಾಗಿದೆ ಎಂದರು.

ಪ್ರೊ.ಸವಿತಾ ಪಟ್ಟಣಶೆಟ್ಟಿ, ದೈಹಿಕ ನಿರ್ದೇಶಕ ಡಾ.ರೀಚಾ ರಾವ್ ಇತರರಿದ್ದರು.