ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಳೇ ವಿದ್ಯಾರ್ಥಿಗಳ ಸಮ್ಮೇಳನ ಶನಿವಾರ ಜರುಗಿತು.
ಅತಿಥಿಯಾಗಿ ಪಾಲ್ಗೊಂಡಿದ್ದ ಹಳೇ ವಿದ್ಯಾರ್ಥಿ, ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹಳೇ ವಿದ್ಯಾರ್ಥಿಗಳ ಶಕ್ತಿ ಬಳಸಿಕೊಳ್ಳಬೇಕು ಎಂದ ಅವರು, ಕಾಲೇಜಿನ ಕ್ರೀಡಾ ಸೌಕರ್ಯ ಹೆಚ್ಚಿಸಲು 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.
ಡಾ.ಬಿ.ಇ.ರಂಗಸ್ವಾಮಿ ಮಾತನಾಡಿ, ಹಳೇ ವಿದ್ಯಾರ್ಥಿಗಳು ಕಾಲೇಜಿನ ನಿಜವಾದ ಶಕ್ತಿಯಾಗುತ್ತಾರೆ. ಹಳೇ ವಿದ್ಯಾರ್ಥಿಗಳು ಸಮುದಾಯದ ಪ್ರಯೋಜನಕ್ಕಾಗಿ ಕೇಂದ್ರ ಕೌಶಲ್ಯ ತರಬೇತಿ ಸ್ಥಾಪಿಸಬಹುದು ಎಂದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಆನ್‌ಲೈನ್ ಮೂಲಕ ಸಮ್ಮೇಳನಕ್ಕೆ ಶುಭ ಹಾರೈಸಿದರು. ಚಂದ್ರಯಾನ-2 ವಿಜ್ಞಾನಿ ಅನುರಾಧಾ ದೇಸಾಯಿ, ವೆಂಟಿಲೇಟರ್ ಮ್ಯಾನ್ ಮತ್ತು ಮಧ್ಯಪ್ರದೇಶದ ಜೀವ ರಕ್ಷಕ ಚಿರಾಗ್ ಶಾ, ಬೇಕಾಂ ಗ್ರುಪ್ ಹೈದ್ರಾಬಾದ್ ಅಧ್ಯಕ್ಷ ಬಿ. ಕೃಷ್ಣ ಮೋಹನ್ ಸೇರಿ 15 ಅತ್ಯುತ್ತಮ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ 12 ದೇಶಗಳಿಂದ ಮತ್ತು ದೇಶದ ಎಲ್ಲಾ ಭಾಗಗಳಿಂದ 300 ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಂಶುಪಾಲ ಡಾ. ಕೆ.ಗೋಪಿನಾಥ್ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ವಾಸುದೇವ ಪರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿರಾ ಉಮರ್ಜಿ ನಿರೂಪಿಸಿದರು. ಸುನೀಲ ರೈ ವಂದಿಸಿದರು.