ಅರಸೀಕೆರೆ: ಪರಹಿತ ಚಿಂತನೆಯೇ ಲಯನ್ಸ್ ಸಂಸ್ಥೆಯ ಮೂಲ ಧ್ಯೇಯ ಎಂದು ಲಯನ್ ಜಿಲ್ಲಾ ಪ್ರಾಂತಪಾಲ ಡಾ.ಮೆಲ್ವಿನ್ ಡಿಸೋಜಾ ಹೇಳಿದರು.
ನಗರದ ಹೊರ ವಲಯದಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಪ್ರಾಂತಪಾಲ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಚಿತ ರಕ್ತದಾನ ಶಿಬಿರ, ಕಣ್ಣು ತಪಾಸಣೆ, ಕೃತಕ ಕಾಲು ಜೋಡಣೆ, ಪರಿಸರ ಸಂರಕ್ಷಣೆ, ಅನೈರ್ಮಲ್ಯ ತಡೆ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಯನ್ನು ಜಗತ್ತಿನ ಉದ್ದಗಲಕ್ಕೂ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ ಎನ್ನುವುದೇ ಹೆಮ್ಮೆಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಕಲ್ಪತರು ಲಯನ್ಸ್ ಸಂಸ್ಥೆ ಸ್ಥಳೀಯ ಕ್ಲಬ್ ಕೂಡ ಮುಂಚೂಣಿಯಲ್ಲಿದೆ ಎಂದರು.
ಮನುಷ್ಯ ತಾನು ಸಂಪಾದಿಸಿದ ಹಣದಲ್ಲಿ ಅಲ್ಪವನ್ನಾದರೂ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಿದರೆ ಸಾರ್ಥಕತೆ ಬರಲಿದೆ. ದೇಗುಲ, ಅಧಿಕಾರ ದೊರೆತ ಕೂಡಲೇ ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡುವ ಬದಲು ಸಂಕಷ್ಟಕ್ಕೆ ಸಿಲುಕಿರುವ ಸದಸ್ಯರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸುವ ಕೆಲಸ ಮಾಡಿರುವುದು ತೃಪ್ತಿ ತಂದಿದೆ ಎಂದರು.
ಲಯನ್ಸ್ ಕಲ್ಪತರು ಸಂಸ್ಥೆಯ ತಾಲೂಕು ಅಧ್ಯಕ್ಷ ಎಚ್.ಬಿ.ಲೋಕೇಶ್ ಮಾತನಾಡಿ, ಪದಾಧಿಕಾರಿಗಳು, ಸದಸ್ಯರು ಹಾಗೂ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವುದು, ನೋಟ್ ಪುಸ್ತಕ ವಿತರಣೆ ಸೇರಿದಂತೆ ಹಲವು ಚಟುವಟಿಕೆ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಸ್ನೇಹಿ ಯೋಜನೆ ರೂಪಿಸುವುದಾಗಿ ಹೇಳಿದರು.
ಲಯನ್ ಸ್ಮಿತಾ ಡಿಸೋಜಾ, ನವೀನ್ ಚಂದ್ರಶೆಟ್ಟಿ, ಹೆಬ್ಬಾರ್, ಕಾರ್ಯದರ್ಶಿ ಡಾ.ವರದರಾಜು, ಖಜಾಂಚಿ ಆಂತೋಣಿ, ವೆಂಕಟೇಶ್, ಗೋವಿಂದರಾಜ್, ಎಚ್.ಬಿ.ಸತೀಶ್, ಎನ್.ಎಲ್.ಕುಮಾರ್, ಬಸವರಾಜು, ವಿಷ್ಣುವರ್ಧನ್, ಹನುಮಂತಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.