* ಹದಗೆಟ್ಟ ಯಂತ್ರ ರಿಪೇರಿಗೆ ಪುರಸಭೆ ನಿರ್ಲಕ್ಷ್ಯ
* ಜನಪ್ರತಿನಿಧಿಗಳ ಜಾಣಮೌನದಿಂದ ಪೀಕಲಾಟ
ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಪಟ್ಟಣ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳ ಅವ್ಯವಸ್ಥೆಯಿಂದಾಗಿ ನಾಗರಿಕರು ಪರದಾಡುವಂತಾಗಿದೆ.
ಪಟ್ಟಣದ ಕೆಂಪೇಗೌಡ ವೃತ್ತ, ಗಾಂಧಿನಗರ ವೃತ್ತ, ಶಿವಕುಮಾರಸ್ವಾಮೀಜಿ ವೃತ್ತ, ಹೊಂಬಾಳಮ್ಮನ ಪೇಟೆ, ಗೌರಮ್ಮನ ಕೆರೆಯ ಬಳಿ, ಹೊಸಪೇಟೆ, ಸೋಮೇಶ್ವರ ದೇಗುಲದ ಬಳಿ,
ಕಲ್ಯಾಗೇಟ್, ಪುರಸಭೆ ಕಚೇರಿಯ ಬಳಿ ಸೇರಿ ಹಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಕೆಟ್ಟಿವೆ. ಇತ್ತೀಚೆಗೆ ಟೊಯೋಟಾದಿಂದ ನಿರ್ಮಿಸಿರುವ ನೀರಿನ ಘಟಕಗಳು ಕೆಟ್ಟಿವೆ. ಖಾಸಗಿ ಮಾಲೀಕತ್ವದ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಗಂಟೆಗಟ್ಟಲೆ ಕಾದು ನೀರು ಪಡೆಯುವಂತಹ ಪರಿಸ್ಥಿತಿ ನಾಗರಿಕರಿಗೆ ಎದುರಾಗಿದೆ.
ಪಟ್ಟಣದ ಬಹುತೇಕ ನೀರಿನ ಘಟಕಗಳಿಗೆ ಪುರಸಭೆಯಿಂದ ಪೂರೈಸಲಾಗುತ್ತಿದ್ದ ಕೊಳವೆಬಾವಿ ನೀರು ಬತ್ತಿರುವುದರಿಂದ ನೀರು ಪೂರೈಕೆ ಸ್ಥಗಿತವಾಗಿದೆ. ಬೇಸಿಗೆ ಸಮೀಪಿಸಿ ನೀರಿಗೆ ಹಾಹಾಕಾರ ಉಂಟಾದರೂ ಪುರಸಭೆ ಕೊಳವೆಬಾವಿ ಕೊರೆಸಿ ನೀರು ನೀಡಲು ಮುಂದಾಗದಿರುವುದು ನಾಗರಿಕರಿಗೆ ಸಮಸ್ಯೆ ತಂದೊಡ್ಡಿದೆ.
ಡಿ.ಕೆ.ಚಾರಿಟಬಲ್ ಟ್ರಸ್ಟ್‌ನಿಂದ ಪಟ್ಟಣದ ಪ್ರಮುಖ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿ ನಂತರ ಪುರಸಭೆ ನಿರ್ವಹಣೆಗೆ ನೀಡಲಾಯಿತು. ಪುರಸಭೆ ಸಮರ್ಪಕ ನಿರ್ವಹಣೆ ಮಾಡದ ಕಾರಣ ಅವೂ ಹದಗೆಟ್ಟಿವೆ. ಘಟಕಗಳನ್ನು ಸರಿಪಡಿಸಲು ಹಲವು ವಾರ್ಡ್ ಸದಸ್ಯರು ಅಧಿಕಾರಿಗಳನ್ನು ಒತ್ತಾಯಿಸಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ. ಪುರಸಭೆಯಿಂದ ಆಗದಿದ್ದರೆ ಬೇರೆಯವರಿಗಾದರೂ ನಿರ್ವಹಿಸಲು ಒಪ್ಪಿಸುತ್ತೇವೆ ಎಂದರೂ ಕುಂಟು ನೆಪ ಹೇಳುವ ಅಧಿಕಾರಿಗಳ ಮಾತು ಕೇಳಿ ಜನಪತ್ರಿನಿಧಿಗಳೂ ಮೌನಕ್ಕೆ ಜಾರಿರುವುದು ವಿಪರ್ಯಾಸ.
2021-22ರಲ್ಲಿ ನೀರಿನ ಘಟಕಗಳ ನಿರ್ವಹಣೆ ಮಾಡಲು ಖಾಸಗಿ ವ್ಯಕ್ತಿಗೆ ಪುರಸಭೆ ರಠಾವು ಮಾಡಿ ಅನುಮತಿ ನೀಡಲಾಯಿತು. ಆ ವ್ಯಕ್ತಿ ಮೃತಪಟ್ಟು ವರ್ಷಗಳೇ ಕಳೆದಿದೆ. ಆದರೆ, ಇಲ್ಲಿಯವರೆಗೂ ನಿರ್ವಹಣೆ ಮಾಡುತ್ತಿರುವ ವ್ಯಕ್ತಿ ಪುರಸಭೆಗೆ ಗೊತ್ತಿಲ್ಲ. ನಿರ್ವಹಣೆಗೆ ನೀಡುತ್ತಿರುವ ಹಣ ಯಾರ ಪಾಲಾಗುತ್ತಿದೆ ಎಂಬುದು ತಿಳಿಯದಂತಾಗಿದೆ. ಒಟ್ಟಾರೆ ನಿರ್ವಹಣೆಗಾಗಿ ಲಕ್ಷಾಂತರ ಹಣ ವ್ಯಯವಾಗುತ್ತಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿನ ಮಿಷನ್‌ಗಳು ಕಳವಾಗಿವೆ. ಇದಕ್ಕೆ ಯಾರು ಹೊಣೆಗಾರರು ಎಂಬುದು ಕೆಲ ಸದಸ್ಯರ ಪ್ರಶ್ನೆಯಾಗಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಖಾಸಗಿ, ಟೊಯೋಟಾ, ಪುರಸಭೆಯ 15 ಶುದ್ಧಕುಡಿಯುವ ನೀರಿನ ಘಟಕಗಳಿದ್ದು, ಕೆಲವು ಕೊಳವೆಬಾವಿಗಳಲ್ಲಿ ನೀರಿಲ್ಲದೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. 4 ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿದ್ದು, ಸರಿಪಡಿಸಲು ಟೆಂಡರ್ ಕರೆಯಲಾಗಿದೆ.
ಶಿವರುದ್ರಯ್ಯ, ಪುರಸಭೆ ಮುಖ್ಯಾಧಿಕಾರಿ
ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಮಾಡಲು ಹಾಗೂ ಕೆಟ್ಟಿರುವ ಘಟಕ ಸರಿಪಡಿಸಲು ಟೆಂಡರ್ ಕರೆದಿದ್ದು, ಸರಿಪಡಿಸಲು, ನಿರ್ವಹಣೆ ಮಾಡಲು ಆದೇಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಎಚ್.ಸಿ.ಬಾಲಕೃಷ್ಣ, ಶಾಸಕ.