ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಕೇಂದ್ರ ಸರ್ಕಾರ ಹೆಸರು ಸೇರಿ ಪ್ರಮುಖ 14 ಬೆಳೆಗಳಿಗೆ ಜೂನ್ ತಿಂಗಳಿನಲ್ಲಿಯೇ ಕನಿಷ್ಠ ಬೆಂಬಲ ಬೆಲೆ ಪರಿಷ್ಕೃತ ದರ ಘೋಷಣೆ ಮಾಡಿದೆ. ಆದರೆ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಪ್ರಾರಂಭಗೊಳ್ಳದೆ ಸಮಸ್ಯೆ ಸೃಷ್ಟಿಯಾಗಿದೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಗುರಿ ಮೀರಿ ಹೆಸರು ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1.32 ಲಕ್ಷ ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ. ತಾಲೂಕಿನಲ್ಲಿ ಲಕ್ಷ್ಮೇಶ್ವರ ಸೇರಿ ದೊಡ್ಡೂರ, ಶಿಗ್ಲಿ, ಅಡರಕಟ್ಟಿ, ಗೊಜನೂರ, ಯತ್ತಿನಹಳ್ಳಿ, ಹರದಗಟ್ಟಿ, ಆದ್ರಳ್ಳಿ, ಅಕ್ಕಿಗುಂದ, ಸೂರಣಗಿ, ಬಾಲೆಹೊಸೂರಲ್ಲಿ ಒಟ್ಟು 5110 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ.
ಮುಂಗಾರು ಪೂರ್ವ ಮಳೆಯಿಂದಾಗಿ ಮೇ 2, 3ನೇ ವಾರದಿಂದಲೇ ಹೆಸರು ಬಿತ್ತನೆ ಮಾಡಲಾಗಿತ್ತು. ಹಳದಿರೋಗ, ಕೀಟಬಾಧೆ, ತಾಮ್ರರೋಗ ಹೀಗೆ ಹತ್ತಾರು ಸಂಕಷ್ಟಗಳ ನಡುವೆ 75- 80 ದಿನಕ್ಕೆ ಹೆಸರು ಬೆಳೆ ಕಟಾವಿಗೆ ಬಂದಿದೆ. ಕಟಾವು ಮಾಡಲು ಬಿಡದ ಮಳೆ, ಕೂಲಿಯಾಳಿನ ಸಮಸ್ಯೆಯಿಂದ ರೈತರು ಚಿಂತೆಗೀಡಾಗಿದ್ದಾರೆ.
ಇನ್ನೊಂದೆಡೆ ಗುಣಮಟ್ಟ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಹೆಸರಿಗೆ ಸರಾಸರಿ 5000 ರೂ.ವರೆಗಿದೆ. ಸೋಮವಾರ ಲಕ್ಷ್ಮೇಶ್ವರ ಎಪಿಎಂಸಿಗೆ 121 ಕ್ವಿಂಟಾಲ್ ಹೆಸರು ಬಂದಿದ್ದು ಕನಿಷ್ಠ 2825ರಿಂದ ಗರಿಷ್ಠ 7699 ರೂ. ಸರಾಸರಿ 4688 ರೂ. ದರಕ್ಕೆ ಮಾರಾಟವಾಗಿದೆ.
ಮಳೆ, ರೋಗಬಾಧೆಗೆ ತುತ್ತಾದ ಹೆಸರಿನ ಗುಣಮಟ್ಟ ಸಂಪೂರ್ಣ ಕುಸಿದಿರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಲು ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು ಮತ್ತು ವ್ಯಾಪಾರಸ್ಥರು. ಇನ್ನು ಸರ್ಕಾರ 8,682 ರೂ. ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿ ಕೇಂದ್ರ ಗಗನ ಕುಸುಮವಾಗಿವೆ.
ಜಿಲ್ಲಾದ್ಯಂತ ಬೆಂಬಲ ಬೆಲೆಯಡಿ ಹೆಸರು ಖರೀದಿಗೆ ಕೇಂದ್ರ ಪ್ರಾರಂಭಿ ಸಲು ಈಗಾಗಲೇ ಜಿಲ್ಲಾಧಿಕಾರಿಗಳಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದಿಂದ ಆದೇಶ ಬಂದ ಕೂಡಲೇ ಖರೀದಿ ಕೇಂದ್ರ ಆರಂಭಿಸಲಾಗುವುದು.-ಡಿ.ಬಿ. ಡೊಕ್ಕಣ್ಣವರ ಸಹಕಾರ ಮಾರಾಟ ಮಂಡಳದ ಜಿಲ್ಲಾ ಅಧಿಕಾರಿ