ಜಿಲ್ಲೆ

ಡಿಎಪಿಗೆ ಪರ್ಯಾಯ ರಸಗೊಬ್ಬರ ಬಳಕೆ ಸೂಕ್ತ

ಕುಂದಗೋಳ: ರೈತರು ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಕೆ ಮಾಡುವುದು ಬಹಳ ಸೂಕ್ತ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಸೋಮವಾರ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸಸ್ಯಗಳ ಬೆಳವಣಿಗೆಗೆ ಜಲಜನಕ, ಆಮ್ಲಜನಕ, ಸಾರಜನಕ, ರಂಜಕ, ಪೋಟ್ಯಾಷ್, ಕಾಲ್ಸಿಯಂ, ಮೆಗ್ನೀಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಕ್ಲೋರಿನ್, ನಿಕಲ್ ಹೀಗೆ 17 ಪೋಷಕಾಂಶ ಬೇಕಾಗುತ್ತದೆ. ರೈತರು ಡಿಎಪಿ, ಯೂರಿಯಾ ಮಾತ್ರ ಹೆಚ್ಚಾಗಿ ಬಳಸುತ್ತಿದ್ದು, ಇದರಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರ ಲಭ್ಯವಿರುತ್ತದೆ. ಇದರಿಂದ ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅವಶ್ಯವಾದ ಪೋಟ್ಯಾಷ್ ಇರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ, ಪೋಟ್ಯಾಷ್​ಯುುಕ್ತ ಸಂಯುಕ್ತ ರಸಗೊಬ್ಬರವಿದ್ದು, ಅವುಗಳನ್ನು ಬಳಬಹುದು ಎಂದರು.

ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಅರವಿಂದಪ್ಪ ಕಟಗಿ ಮಾತನಾಡಿ, ರೈತರಿಗೆ ರಸಗೊಬ್ಬರ ಮಾರಾಟಗಾರರು ಒಂದು ಗೊಬ್ಬರ ಚೀಲದ ಜೊತೆಗೆ ಲಿಂಕ್ ಎನ್ನುವ ಪ್ಯಾಕೇಟ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದು, ಅದು ಕಡ್ಡಾಯವಲ್ಲ, ಏನೇ ಸಮಸ್ಯೆಯಿದ್ದರೂ ಕೃಷಿ ಅಧಿಕಾರಿಗಳನ್ನು ಸಂರ್ಪಸಬೇಕು ಎಂದರು.

ವಿವಿಧ ಬೆಳೆಗಳಿಗೆ ಶಿಫಾರಸು ಮಾಡಿರುವ ಪೋಷಕಾಂಶ ಒದಗಿಸುವ ರಸಗೊಬ್ಬರಗಳ ಸಂಯೋಜನೆಗಳ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ರೈತ ಮುಖಂಡರಾದ ಹೇಮನಗೌಡ ಪಾಟೀಲ, ಸಕ್ರು ಲಮಾಣಿ, ಫಕೀರಪ್ಪ ಪೂಜಾರ ಮಾತನಾಡಿದರು.

ಕೃಷಿ ಇಲಾಖೆ ಅಧಿಕಾರಿಗಳಾದ ಪ್ರಶಾಂತ ಸೋಲಬನವರ, ಬಿ.ಜಿ. ಜಗ್ಗಲ್, ರಾಜಶೇಖರ ಮಠಪತಿ, ಅಂಬಿಕಾ ಮಹೆಂದ್ರಕರ, ಬಾಬಾಜಾನ್ ಮಿಶ್ರಿಕೋಟಿ, ಸೋಮರಾವ್ ದೇಸಾಯಿ, ವಿಜಯಕುಮಾರ ಹಾಲಿ, ಶಿದ್ಧಲಿಂಗಪ್ಪ ಬಾಳಿಕಾಯಿ, ಭರಮಣ್ಣ ಸೊರಟೂರ, ಚಿದಂಬರ ಯಜ್ಞೇಶ್ವರ, ಮಲ್ಲಿಕಾರ್ಜುನ ಕುನ್ನೂರ, ಸಿದ್ದಪ್ಪ ಇಂಗಳಹಳ್ಳಿ, ಮಾರುದ್ರಪ್ಪ ಮೂಲಿಮನಿ, ದೇವಪ್ಪ ಇಚ್ಚಂಗಿ, ಕೆ.ಆರ್. ಡಗಲಿ, ರುದ್ರಪ್ಪ ಕಿರೇಸೂರ, ಮಲ್ಲಣ್ಣ ಮಾರಡಗಿ, ಲಕ್ಷ್ಮೀ ಬನ್ನಿಕೊಪ್ಪ, ಮಂಜುಳಾ ಯರಗಪ್ಪನವರ, ಶ್ರೀದೇವಿ ಆಲೂರ, ಇತರರಿದ್ದರು.