ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಮಕ್ಕಳಿಗೆ ಕಲಿಕೆ ಜತೆಗೆ ಸಂಸ್ಕಾರ ಕಲಿಸಿ

ನಾಗೇಶ ಎಸ್

ಬೆಟ್ಟದಪುರ: ಪಾಲಕರು ತಮ್ಮ ಮಕ್ಕಳಿಗೆ ಕಲಿಕೆಯ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕಿದೆ ಎಂದು ಬೆಟ್ಟದಪುರ ಡಿಟಿಎಂಎನ್ ವಿದ್ಯಾಸಂಸ್ಥೆ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸಲಿದ್ದು, ಅದರಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಅಕ್ಷರ ಅಭ್ಯಾಸ ಮಾಡಿಸುವುದರ ಜತೆಗೆ ನಮ್ಮ ಧಾರ್ಮಿಕ ಆಚರಣೆ ಸಂಸ್ಕೃತಿ ಮಾಹಿತಿ ನೀಡಿ, ಅದನ್ನು ಉಳಿಸಿ ಬೆಳೆಸುವ ಕರ್ತವ್ಯ ಮಾಡಬೇಕಿದೆ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ನಟರಾಜ್ ಮಾತನಾಡಿ, ಸಂಸ್ಥೆ ಪ್ರಾರಂಭವಾದಾಗಿನಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಗಮನಹರಿಸಿ ಯಶಸ್ಸು ಸಾಧಿಸಿದೆ. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಪಾಲಕರೊಟ್ಟಿಗೆ ಅಕ್ಷರಭ್ಯಾಸ ಮಾಡಿಸುವ ಮೂಲಕ ಮೊದಲ ಕಲಿಕೆಗೆ ಸಾಂಪ್ರದಾಯಿಕವಾಗಿ ಒತ್ತು ನೀಡಲಾಗುತ್ತಿದೆ ಎಂದರು.

ಸಂಸ್ಥೆಯ ನಿರ್ದೇಶಕರಾದ ವಿಜಯ್ ಕುಮಾರ್, ಪ್ರಾಂಶುಪಾಲ ಸತೀಶ್, ಮುಖ್ಯಶಿಕ್ಷಕರಾದ ಮುರಳಿಕೃಷ್ಣ, ಜಯಂತಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಪಾಲಕರು ಇದ್ದರು.