ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ  
ಜಿಲ್ಲೆ

ವಿಐಎಸ್‌ಎಲ್ ಜತೆಗೆ ವಿಶ್ವೇಶ್ವರಯ್ಯ ಅವರ ಹೆಸರನ್ನೂ ಉಳಿಸುವೆ: ಎಚ್‌ಡಿಕೆ

ನವೀನ ಬಿ.ಎಂ

ಶಿವಮೊಗ್ಗ: ಭದ್ರಾವತಿಯ ವಿಐಎಸ್‌ಎಲ್(ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ)ಯನ್ನು ಎಷ್ಟೇ ಕಷ್ಟವಾದರೂ ಉಳಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕಾರ್ಖಾನೆ ಜತೆಗೆ ವಿಶ್ವೇಶ್ವರಯ್ಯ ಅವರ ಹೆಸರನ್ನೂ ಉಳಿಸುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಈ ಹಿಂದೆ ವಿಐಎಸ್‌ಎಲ್ ಮುಚ್ಚಬೇಕೆಂಬ ತೀರ್ಮಾನಕ್ಕೆ ಬರಲಾಗಿತ್ತು. ಸಾವಿರಾರು ಕುಟುಂಬಗಳಿಗೆ ಕಾರ್ಖಾನೆ ಅನ್ನ ಕೊಟ್ಟಿದೆ. ಅದನ್ನು ಉಳಿಸಲು ಎಷ್ಟು ಹೋರಾಟ ಮಾಡುತ್ತಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತಿದೆ. ಕಾರ್ಖಾನೆಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದೇನೆ. ಆರ್ಥಿಕ ಏರಿಳಿತ ಆಗಿರುವ ಕಂಪನಿಗಳನ್ನು ಖಾಸಗಿತನಕ್ಕೆ ಒಪ್ಪಿಸಬೇಕೆಂಬ ತೀರ್ಮಾನ ಆಗಿದೆ. ಬಂಡವಾಳ ಹೂಡಿಕೆ ಮಾಡಿದಂತೆ ನಿರ್ಧರಿಸಲಾಗಿದೆ. ಆದರೂ ವಿಐಎಸ್‌ಎಲ್ ಉಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶಾಖಪಟ್ಟಣದ ರಾಷ್ಟ್ರೀಯ ಇಸ್ಪಾತ್ ನಿಗಮ್(ಆರ್‌ಎನ್‌ಐಎಲ್) ಕಾರ್ಖಾನೆಯ ಪರಿಸ್ಥಿತಿಯೂ ವಿಐಎಸ್‌ಎಲ್‌ಗೆ ಭಿನ್ನವಾಗಿಲ್ಲ. ಲಾಭದಲ್ಲಿದ್ದ ಆ ಕಾರ್ಖಾನೆ ಇಂದು ನಷ್ಟದಲ್ಲಿದೆ. ಅದರ ಅಭಿವೃದ್ಧಿಗೆ 35 ಸಾವಿರ ಕೋಟಿ ರೂ. ಅಗತ್ಯವಿದೆ. ಅದೇ ರೀತಿ ವಿಐಎಸ್‌ಎಲ್ಗೆ ಕನಿಷ್ಠ 15 ಸಾವಿರ ಕೋಟಿ ರೂ. ಅಗತ್ಯವಿದೆ. ಕಾರ್ಖಾನೆ ಅಭಿವೃದ್ಧಿ ವಿಷಯದಲ್ಲಿ ನಾನು ಪ್ರವಾಹದ ವಿರುದ್ಧ ಈಜಬೇಕಿದೆ ಎಂದರು.
ಬೃಹತ್ ಕೈಗಾರಿಕೆ ಇಲಾಖೆಯಲ್ಲಿ ದೊಡ್ಡ ಮಟ್ಟದ ಅನುದಾನ ಒದಗಿಸುವ ಅವಕಾಶವಿಲ್ಲ. ಯಾವುದೇ ಯೋಜನೆಗಳಿದ್ದರೂ ಅದನ್ನು ಸಚಿವ ಸಂಪುಟದಲ್ಲಿಟ್ಟು ಹಣಕಾಸು ಇಲಾಖೆಗೆ ಶಿಫಾರಸು ಮಾಡಬಹುದು. ಇಡೀ ಘಟಕವನ್ನೇ ಮರು ನಿರ್ಮಾಣ ಮಾಡಬೇಕಿದೆ. ಸೈಲ್(ಭಾರತೀಯ ಉಕ್ಕು ಪ್ರಾಧಿಕಾರ)ನಿಂದ ಕಾರ್ಖಾನೆಗೆ ಜೀವ ತುಂಬಬೇಕಿದೆ. ಸ್ವಲ್ಪ ಸಮಯವನ್ನು ತೆಗೆದುಕೊಳ್ಳಲಿದೆ. ಹಾಗಾಗಿ ಕಾರ್ಮಿರು ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಗೊಂದಲ, ಅನುಮಾನಗಳು ಬೇಡ ಎಂದು ಹೇಳಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಕಡಿದಾಲ್ ಗೋಪಾಲ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಪ್ರಮುಖರಾದ ಶಾರದಾ ಅಪ್ಪಾಜಿಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.