ಜಿಲ್ಲೆ

ಹೈಕಮಾಂಡ್ ಜೊತೆ ಶಾಸಕರ ಬೆಂಬಲವೂ ಬೇಕು: ಶಾಸಕರಿಲ್ಲದೇ ಯಾರೂ ಸಿಎಂ ಆಗೋಕೆ ಆಗಲ್ಲ: ಸಿಎಂ ಸಿದ್ದರಾಮಯ್ಯ| CM Siddaramaiah

CM Siddaramaiah: ಹೈಕಮಾಂಡ್ ಜೊತೆಗೆ ಶಾಸಕರ ಬೆಂಬಲವೂ ಬೇಕು, ಶಾಸಕರ ಬೆಂಬಲ ಇಲ್ಲದೇ ಯಾರೂ ಸಿಎಂ ಆಗಲ್ಲ ಎಂದು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸೋಮವಾರ(ಅ. 13) ಸಾಫ್ಟ್​ ಆಗಿ ತಿರುಗೇಟು ನೀಡಿದರು.

ಈ ಕುರಿತು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೈಕಮಾಂಡ್ ಅಂತಿಮವೇ ಆದರೆ, ಅದರ ಜೊತೆಗೆ ಶಾಸಕರ ನಿರ್ಧಾರವೂ ಬೇಕಾಗುತ್ತೆ. ಸಿಎಂ ಆಗಲು ಶಾಸಕರ ಬೆಂಬಲದ ಜೊತೆ ಹೈಕಮಾಂಡ್ ಆಶೀರ್ವಾದವೂ ಬೇಕು ಎಂದು ಹೇಳಿದರು.

ಸರ್ಕಾರಿ ಸ್ಥಳಗಳಲ್ಲಿ ಆರ್​ಎಸ್​ಎಸ್ ಚಟುವಟಿಕೆಗಳಿಗೆ ನಿರ್ಬಂಧಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಚೀಪ್ ಸೆಕ್ರೇಟರಿಗೆ ಸೂಚಿಸಿದ್ದೇನೆ. ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೆ, ಆ ರೀತಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು.

ಇಂದು ಸಂಜೆ ನಡೆಯುವ ಸಚಿವ ಡಿನ್ನರ್ ಪಾರ್ಟಿಗೂ, ಸಚಿವ ಸಂಪುಟ ಪುನರ್​​ರಚನೆಗೂ ಯಾವುದೇ ಸಂಬಂಧವಿಲ್ಲ. ನಾನು ಆಗಾಗ ಡಿನ್ನರ್ ಪಾರ್ಟಿ ನೀಡುತ್ತಿರುತ್ತೇನೆ. ಊಟದಲ್ಲಿ ಏನೂ ಸ್ಪೇಷಲ್ ಇಲ್ಲ. ತಮಗೆ ಮತ್ತು ಬಿಜೆಪಿಯವರಿಗೆ ಅದು ಸ್ಪೇಷಲ್ ಎಂದು ಸಿಎಂ ತಮಾಷೆ ಮಾಡಿದರು.

ಯಾವುದೇ ನವೆಂಬರ್ ಕ್ರಾಂತಿಯೂ ಆಗಲ್ಲ. ಸಂಪುಟದಲ್ಲಿದ್ದ ಇಬ್ಬರು ವಾಲ್ಮೀಕಿ ಸಮಾಜದ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ. ಮುಂದಿನ ಸಂಪುಟ ಪುನರ್ ರಚನೆ ವೇಳೆ ಅದೇ ಸಮುದಾಯಕ್ಕೆ ಅವಕಾಶ ಕೊಡುತ್ತೇವೆ. ಕೃಷ್ಣ ಮೇಲ್ದಂಡೆ ಯೋಜನೆಗೆ ದುಡ್ಡು ಕೊಡಲು ಶುರುಮಾಡ್ತೇವೆ. ಮುಂದಿನ ನಾಲ್ಕು ವರ್ಷದಲ್ಲಿ ಭೂಸ್ವಾಧೀನ ಮಾಡ್ತೇವೆ ಎಂದು ಹೇಳಿದರು.

ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರ ಆರೋಗ್ಯ ಚೆನ್ನಾಗಿದೆ. ಚೇತರಿಕೆ ಆಗುತ್ತಿದೆ. ಸತ್ಯನಾರಾಯಣ ಎಂಬ ವೈದ್ಯರೊಂದಿಗೆ ಮಾತನಾಡಿದ್ದೇನೆ. ಎರೆಡ್ಮೂರು ದಿನಗಳಲ್ಲಿ ಗುಣಮುಖರಾಗುತ್ತಾರೆ ಎಂದು ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.