ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಪ್ರಥಮ ಸ್ಥಾನ ಬರುವುದು, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರಶಸ್ತಿ ತರುವುದು ವಿದ್ಯಾರ್ಥಿಗಳಿಗೆ ಮಾತ್ರ ಸಂತಸ ತರುವುದಿಲ್ಲ. ಶಿಕ್ಷಣ ಸಂಸ್ಥೆಗೆ ಇದರಿಂದ ಗೌರವ ಹೆಚ್ಚುತ್ತದೆ. ಜತೆಗೆ ಕಲಿಸಿದ ಗುರುಗಳ ಶ್ರಮವು ಸಾರ್ಥಕವಾಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜೆಎಸ್ಎಸ್ ಅಂಗ ಸಂಸ್ಥೆಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಗುರಿ ಇರಬೇಕು. ಗುರಿಗೆ ತಕ್ಕ ಸಾಧನೆ ಇರಬೇಕು. ಪುಸ್ತಕ ಓದಿ ಹೆಚ್ಚಿನ ಅಂಕ ಗಳಿಸುವುದಷ್ಟೇ ಮುಖ್ಯ ಆಗಬಾರದು. ಅಭ್ಯಾಸದ ಜತೆಗೆ ವ್ಯವಹಾರದ ಬೌದ್ಧಿಕ ಸಾಮರ್ಥ್ಯ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ. ನಾಗರಿಕ ಸಮಾಜದಲ್ಲಿ ಒಳ್ಳೆ ವ್ಯಕ್ತಿಯಾಗಿ ಬದುಕುವುದು ಅವಶ್ಯಕ ಎಂದರು.
ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿತವಾದ ಜೆಎಸ್ಎಸ್ ಶಿಕ್ಷಣ ಸಂಸ್ಥೆ ದೇಶಕ್ಕೆ ಹಲವಾರು ಮಹನೀಯರನ್ನು ಕೊಡುಗೆಯಾಗಿ ನೀಡಿದೆ. ಹೆಗ್ಗಡೆಯವರು ಜೆಎಸ್ಎಸ್ ಸಂಸ್ಥೆಯನ್ನು ವಹಿಸಿಕೊಂಡ ನಂತರ ಧಾರವಾಡದ ಶೈಕ್ಷಣಿಕ ಚಿತ್ರಣವೇ ಬದಲಾಗಿದೆ ಎಂದರು.
ಜೆಎಸ್ಎಸ್ ಆಡಳಿತ ಮಂಡಳಿ ಸದಸ್ಯರಾದ ಡಿ. ಸುರೇಂದ್ರ ಕುಮಾರ, ಶ್ರೀಕಾಂತ ಕೆಮ್ತೂರ, ಎಸ್ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೀವಂಧರಕುಮಾರ, ಎಂಬಿಎ ಕಾಲೇಜಿನ ನಿರ್ದೇಶಕ ಡಾ. ಶಿವಪ್ರಸಾದ, ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಜಿನ್ನಪ್ಪ ಕುಂದಗೋಳ, ಸಾಧನಾ. ಎಸ್, ತ್ರಿವೇಣಿ. ಆರ್., ಇತರರು ಇದ್ದರು.
ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ನಾಗಚಂದ್ರ ವಂದಿಸಿದರು.