ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಬದಲಾಗುತ್ತಿರುವ ಕಾಲಮಾನಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ನೀಡಿ ಧನಾತ್ಮಕ ಹಾಗೂ ಗುಣಾತ್ಮಕವಾಗಿ ಪರಿಣಾಮಕಾರಿಯಾಗಲು ಸಂಸ್ಥೆಯಲ್ಲಿ ಬಿ ವೋಕ್ ಕೋರ್ಸ್ ಆರಂಭಿಸಲಾಗಿದೆ. ಜ್ಞಾನದ ಜತೆಗೆ ಪರಿಪಕ್ವತೆಯ ಕೌಶಲ ಕಲಿತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಎಲ್ಲ ಉದ್ಯೋಗ, ಸ್ವಉದ್ಯೋಗದಲ್ಲಿ ಕೌಶಲದಿಂದ ಯಶಸ್ಸು ಗಳಿಸಬಹುದು ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್‌ಡಿಎಂ ಕಾಲೇಜಿನ ಬಿ ವೋಕ್ ವಿಭಾಗದ ವತಿಯಿಂದ ಗುರುವಾರ ನಡೆದ ರಾಜ್ಯಮಟ್ಟದ ಪದವಿ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಬಿ ವೋಕ್ ಉತ್ಸವ-2025 ಉದ್ಘಾಟಿಸಿ ಮಾತನಾಡಿದರು. ಎಸ್‌ಡಿಎಂ ಪಪೂ ಕಾಲೇಜು ಪ್ರಾಚಾರ್ಯ ಪ್ರಮೋದ್ ಕುಮಾರ್ ವಿದ್ಯಾರ್ಥಿಗಳ ವ್ಯಾಸಂಗಗಳ ಕಥೆಗಳು ಕಥಾ ಸಂಕಲನ ಬಿಡುಗಡೆಗೊಳಿಸಿದರು. ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಂಪಿ ವಿವಿಯಿಂದ ಪಿಎಚ್‌ಡಿ ಪಡೆದ ಉಪನ್ಯಾಸಕ ಸುವೀರ್ ಜೈನ್ ಅವರನ್ನು ಉಪನ್ಯಾಸಕ ವೃಂದದವರು ಅಭಿನಂದಿಸಿದರು. ಬಿವೋಕ್ ಉತ್ಸವ ಸಂಯೋಜಕ ಡಾ.ಸುವೀರ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಜಿಟಲ್ ಮೀಡಿಯಾ ಮತ್ತು ಫಿಲಂ ಮೇಕಿಂಗ್ ವಿಭಾಗದ ಮಾಧವ ಹೊಳ್ಳ, ಅಶ್ವಿತಾ ಎಚ್.ಆರ್., ಕುಸುಮಾ ಹಾಗೂ ವಿದ್ಯಾರ್ಥಿ ನಾಯಕರಾದ ಸೌರವ, ಯೋಗೀಶ್ ಮತ್ತು ಐಶ್ವರ್ಯ ಉಪಸ್ಥಿತರಿದ್ದರು. ಅಶ್ವಿನಿ ಜೈನ್ ವರದಿ ಮಂಡಿಸಿದರು. ಅಶ್ವಿತಾ ಎಚ್.ಆರ್.ವಂದಿಸಿದರು.
ಸಮಕಾಲೀನ ಸ್ಪರ್ಧಾ ಪ್ರಪಂಚದಲ್ಲಿ ಮುನ್ನುಗ್ಗಿದವನು ಯಶಸ್ವಿಯಾಗುತ್ತಾನೆ. ಶೈಕ್ಷಣಿಕ ಕ್ರಾಂತಿಯಿಂದ ನೂತನ ಶಿಕ್ಷಣ ನೀತಿಯಲ್ಲಿ ಕೌಶಲಗಳಿಗೆ ಆದ್ಯತೆ ಹಾಗೂ ಅವಕಾಶಗಳು ಅಗತ್ಯ. ಕೌಶಲಾಧಾರಿತ ಶಿಕ್ಷಣದಿಂದ ಜೀವನದಲ್ಲಿ ವೈಫಲ್ಯ ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬನಲ್ಲೂ ಪ್ರತಿಭೆಯಿದ್ದು ಅವಕಾಶಗಳು ಮುಕ್ತವಾಗಿವೆ. ಪ್ರಮೋದ್ ಕುಮಾರ್, ಎಸ್‌ಡಿಎಂ ಪ.ಪೂ.ಕಾಲೇಜು ಪ್ರಾಚಾರ್ಯ.
ಮಾನಸಿಕವಾಗಿ ದೈಹಿಕವಾಗಿ ಸ್ಪರ್ಧೆಗಳನ್ನು ಎದುರಿಸಿ ಪಡೆಯುವ ಅನುಭವ ಮುಂದಿನ ಬದುಕಿಗೆ ಉಪಯೋಗವಾಗುವುದು. ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುವುದು ಮುಖ್ಯವಲ್ಲ. ಭಾಗವಹಿಸಿ ಅನುಭವ ಪಡೆಯುವುದು ಮುಂದಿನ ಜೀವನಕ್ಕೆ ದಾರಿದೀಪವಾಗಬಲ್ಲುದು. ಮನೋಧರ್ಮ, ಕೌಶಲ ಮತ್ತು ಅನುಭವ ಜ್ಞಾನ ನಮ್ಮ ಭವಿಷ್ಯ ರೂಪಿಸುತ್ತದೆ. ಡಾ.ಬಿ.ಎ ಕುಮಾರ ಹೆಗ್ಡೆ, ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ.