ಜಿಲ್ಲೆ

ಕನ್ನಡದ ಜೊತೆಗೆ ಅರೆಭಾಷೆಯನ್ನು ಉಳಿಸಿ ಬೆಳೆಸಿ

ಮಡಿಕೇರಿ: ಕನ್ನಡ ಉಪ ಭಾಷೆಯಾದ ಅರೆಭಾಷೆ ಉಳಿಸಿ ಬೆಳೆಸುವಂತಾಗಲು ಕನ್ನಡ ಭಾಷೆ ಜೊತೆಗೆ ಅರೆಭಾಷೆಯನ್ನೂ ಕಲಿಯಬೇಕು ಎಂದು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಚೆಯ್ಯಂಡಾಣೆಯ ನರಿಯಂದಡ ಅಯ್ಯಪ್ಪ ಯುವಕ ಸಂಘ ಸಹಕಾರದಲ್ಲಿ ಚೆಯ್ಯಂಡಾಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ನಡೆದ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಷ್ಟ್ರದಲ್ಲಿ ಅನೇಕ ಭಾಷೆ ಮತ್ತು ಉಪ ಭಾಷೆಗಳಿದ್ದು, ಕನ್ನಡದ ಉಪ ಭಾಷೆಯಲ್ಲಿ ಅರೆಭಾಷೆಯೂ ಒಂದಾಗಿದೆ. ಕನ್ನಡ ಭಾಷೆ ಜೊತೆಗೆ ಅರೆಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಜತೆಗೆ ಅರೆಭಾಷೆಯನ್ನು ಪ್ರೋತ್ಸಾಹಿಸಬೇಕಿದೆ. ಭಾರತದಲ್ಲಿ ಅನೇಕ ಭಾಷೆಗಳಿದ್ದು, ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಜೊತೆಗೆ ಜೊತೆಗೆ ಅರೆಭಾಷೆಯನ್ನು ಮಾತನಾಡುವಂತಾಗಬೇಕು ಎಂದರು.

ಪ್ರತಿಯೊಬ್ಬರೂ ಮುಂದಿನ ಪೀಳಿಗೆಗೆ ಹಾಗೂ ರಾಷ್ಟ್ರದ ಏಕತೆಗಾಗಿ ಕೈಜೋಡಿಸಬೇಕು. ಕೊಡಗು ಜಿಲ್ಲೆಯ ಜನರು ಭಾರತ ದೇಶಕ್ಕೆ ತಮ್ಮದೇ ಆದ ಕೊಡಗೆ ನೀಡಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಸಂಸದರು ನುಡಿದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಇದರಿಂದ ನಾಡಿನ ಸಣ್ಣ ಸಣ್ಣ ಭಾಷಿಕರ ಸಂಸ್ಕೃತಿ ಉಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಭಾಷೆ ಇದ್ದಲ್ಲಿ ಜನಾಂಗ ಉಳಿಯುತ್ತದೆ. ಭಾಷೆ ಮಾತನಾಡದಿದ್ದಲ್ಲಿ ಜನಾಂಗವೂ ಇಲ್ಲದಾಗುತ್ತದೆ. ಆದ್ದರಿಂದ ಮುಂದಿನ ಪೀಳಿಗೆಯ ಮಕ್ಕಳಿಗೆ ಅರೆಭಾಷೆಯನ್ನು ಕಲಿಸುವಂತಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ. ಕನ್ನಡ ಭಾಷೆ ಉಳಿದಲ್ಲಿ, ಅದರ ಉಪ ಭಾಷೆಗಳು ಉಳಿಯಲು ಸಾಧ್ಯ, ಆ ದಿಸೆಯಲ್ಲಿ ವಿವಿಧ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹೇಳಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಮ್ಮ ನಮ್ಮ ಮಾತೃ ಭಾಷೆ ಮಾತನಾಡಿದರೆ ಅದರಂತ ಸಂತಸ ಮತ್ತೊಂದಿಲ್ಲ, ಆದ್ದರಿಂದ ಸ್ಥಳೀಯ ಭಾಷೆ ಮತ್ತು ಸಂಪ್ರದಾಯ ಮರೆಯಬಾರದು. ಜಿಲ್ಲೆಯಲ್ಲಿರುವ ಅಕಾಡೆಮಿಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ, ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಕೇರಳ ಗಡಿ ಭಾಗಕ್ಕೆ ಹತ್ತಿರ ಇರುವ ಚೆಯ್ಯಂಡಾಣೆಯಲ್ಲಿ ಅರೆಭಾಷೆ ಗಡಿನಾಡ ಉತ್ಸವ ಆಯೋಜಿಸಿರುವುದು ಉಪಯುಕ್ತವಾಗಿದೆ. ಅರೆಭಾಷೆ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಅರೆಭಾಷೆ ಗಡಿನಾಡ ಉತ್ಸವ ಸಹಕಾರಿ ಆಗಿದೆ. ಅರೆಭಾಷೆ ಆಚಾರ, ವಿಚಾರ ಮತ್ತು ಸಂಸ್ಕೃತಿ ಉಳಿಯಬೇಕು. ಭಾಷೆ ಉಳಿದಲ್ಲಿ ಸಂಸ್ಕೃತಿ ಉಳಿಯುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಡಿಕೇರಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ, ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಅಕಾಡೆಮಿ ಸದಸ್ಯ ಚಂದ್ರಾವತಿ ಬಡ್ಡಡ್ಕ, ಚೆಯ್ಯಂಡಾಣೆ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳ್ಳಿಯಂಡ್ರ, ಮೈಸೂರು ಗೌಡ ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್, ಕೆದಮುಳ್ಳೂರು ಗ್ರಾ.ಪಂ.ಮಾಜಿ ಸದಸ್ಯ ಗೌಡುಧಾರೆ ಚೋಟು ಬಿದ್ದಪ್ಪ, ಅಕಾಡೆಮಿ ಸದಸ್ಯರು, ಇತರರು ಇದ್ದರು.