ಜಿಲ್ಲೆ

ವಿದ್ಯುತ್​ನೊಂದಿಗೆ ಮೊಬೈಲ್ ಸಂಪರ್ಕವೂ ಕಡಿತ

Gadag - Desk - Tippanna Avadoot

ಸಿದ್ದಾಪುರ: ತಾಲೂಕಿನಾದ್ಯಂತ ಹಲವು ದಿನಗಳಿಂದ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ಮೊಬೈಲ್ ಸಂಪರ್ಕವೂ ಕಡಿತಗೊಳ್ಳುವುದರಿಂದ ಜನತೆ ಪರದಾಡುವಂತಾಗಿದೆ.

ತಾಲೂಕಿನ ಕಾನಸೂರು, ಹಾರ್ಸಿಕಟ್ಟಾ, ಹೇರೂರು, ಹೆಗ್ಗರಣಿ, ನಿಲ್ಕುಂದ, ದೊಡ್ಮನೆ- ಬಿದ್ರಕಾನ, ಬಿಳಗಿ ಮತ್ತಿತರ ಗ್ರಾಮೀಣ ಭಾಗದಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗುತ್ತದೆ. ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.

ಗ್ರಾಮೀಣ ಭಾಗದಲ್ಲಿರುವ ಬ್ಯಾಂಕ್, ಸೊಸೈಟಿ, ಆಸ್ಪತ್ರೆ, ಶಾಲೆಗಳು ಸೇರಿ ವಿವಿಧ ರೀತಿಯ ಅಂಗಡಿಯವರು ನಿತ್ಯ ಹೆಸ್ಕಾಂ ಇಲಾಖೆಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಈಗ ಬರುತ್ತದೆ ಅಥವಾ ಮೇನ್ ಲೈನ್ ಪಾಲ್ಟ್, ಇನ್ಸುಲೇಟರ್ ಪಂಕ್ಚರ್ ಆಗಿದೆ ಎನ್ನುವ ಹಾರಿಕೆ ಉತ್ತರ ನೀಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಈಗ ಮಳೆಗಾಲ ಆರಂಭವಾಗಿದೆ. ಒಂದು ಮಳೆ ಬಂದರೆ ಗ್ರಾಮೀಣ ಪ್ರದೇಶಗಳ ಜನತೆ ಕಗ್ಗತ್ತಲಿನಲ್ಲಿ ಕಾಲಕಳೆಯವಂತಾಗುತ್ತದೆ. ಇನ್ನು ಮಳೆಗಾಲದಲ್ಲಿ ಹೇಗೆ ಎನ್ನುವ ಚಿಂತೆ ಈಗಲೇ ಜನತೆಯನ್ನು ಕಾಡಲಾರಂಭಿಸಿದೆ.

ಬಹುತೇಕ ಗ್ರಾಮೀಣ ಭಾಗದಲ್ಲಿ ಬಿಎಸ್​ಎನ್​ಎಲ್, ಜಿಯೋ , ಏರ್​ಟೆಲ್ ಕಂಪನಿಗಳ ಮೊಬೈಲ್ ಟವರ್​ಗಳಿವೆ. ಅವುಗಳೆಲ್ಲ ವಿದ್ಯುತ್ ನಂಬಿ ಕಾರ್ಯ ನಿರ್ವಹಿಸುತ್ತಿರುವುದರಿಂದ ವಿದ್ಯುತ್ ಹೋದಾಕ್ಷಣ ಬಿಎಸ್​ಎನ್​ಎಲ್ ನೆಟ್​ವರ್ಕ್ ಖಡಿತಗೊಳ್ಳುತ್ತದೆ. ಎರಡು ಮೂರು ತಾಸುಗಳಲ್ಲಿ ಜಿಯೋ ಹಾಗೂ ಏರ್​ಟೆಲ್ ನೆಟ್​ವರ್ಕ್ ಕೂಡ ನಾಪತ್ತೆಯಾಗಿಬಿಡುತ್ತದೆ. ಇದರಿಂದ ಹಳ್ಳಿಗಳ ಜನರು ಪರದಾಡುವಂತಾಗುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮಳೆಗಾಲದ ಸಮಯದಲ್ಲಿ ಸಾರ್ವಜನಿಕರೇ ತಮ್ಮ ತಮ್ಮ ಊರಿನಲ್ಲಿರುವ ವಿದ್ಯುತ್ ಲೈನ್​ಗಳಿಗೆ ತಾಗುವ ಮರದ ಟೊಂಗೆಯನ್ನು ಕಡಿದು ಸ್ವಚ್ಛಮಾಡಿಕೊಡುತ್ತಾರೆ. ಆ ಕೆಲಸವೂ ವಿದ್ಯುತ್ ಇಲಾಖೆ ಸಿಬ್ಬಂದಿಗೆ ನೀಡುವುದಿಲ್ಲ. ಆದರೂ ಸಹ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂ ವಿಫಲವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ವಿದ್ಯುತ್ ಗ್ರೀಡ್  ಗಮನಹರಿಸಲಿ

ಕಾನಸೂರು ಸಮೀಪ ವಿದ್ಯುತ್ ಗ್ರೀಡ್ ನಿರ್ವಣಕ್ಕೆ ಜಾಗ ಗುರುತಿಸಿ ನೀಲ ನಕ್ಷೆ ಸಿದ್ಧ್ದಡಿಸಲಾಗಿದೆ. ಆದರೆ, ಅನುದಾನ ಬಿಡುಗಡೆ ಯಾಗದ ಹಿನ್ನೆಲೆಯಲ್ಲಿ ವಿದ್ಯುತ್ ಗ್ರೀಡ್ ನಿರ್ಮಾಣ ಕಾರ್ಯ ಆರಂಭವಾಗಲಿಲ್ಲ. ಕಾನಸೂರಿನಲ್ಲಿ ವಿದ್ಯುತ್ ಗ್ರೀಡ್ ನಿರ್ವಣವಾದರೆ ಕಾನಸೂರು ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿದಂತಾಗುತ್ತದೆ. ಶಾಸಕ ಭೀಮಣ್ಣ ನಾಯ್ಕ ಅವರು ವಿದ್ಯುತ್ ಗ್ರೀಡ್ ನಿರ್ವಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಾಶ್ವತ ಪರಿಹಾರವಾಗಲಿ

ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ ಆಗುವುದು ಸಾಮಾನ್ಯವಾಗಿಬಿಟ್ಪಿದೆ. ಬೇಸಿಗೆ ಸಮಯದಲ್ಲಿ ರಿಪೇರಿಗೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ಆದರೂ ವಿದ್ಯುತ್ ಸಮಸ್ಯೆ ಬಗೆಹರಿಯುತ್ತಿಲ್ಲ. ಜತೆಗೆ ಹೆಸ್ಕಾಂನಲ್ಲಿ ಲೈನ್​ವುನ್​ಗಳ ಕೊರತೆ ಸಾಕಷ್ಟಿದೆ. ಇವೆಲ್ಲ ಸಮಸ್ಯೆಗಳಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಳೆಗಾಲ ಬಂದರೆ ಸಾಕು ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಪ್ರಾರಂಭವಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.