ಹುಲಿಕೆರೆ ಗ್ರಾಮದ ಕೆ.ಆರ್.ಸಾಗರ ರಸ್ತೆಯಲ್ಲಿರುವ ಬಿ.ಜಿ.ಎಸ್ ಬಾಲಜಗತ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಚಾಲನೆ ನೀಡಿದರು.  
ಜಿಲ್ಲೆ

ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರವೂ ಮುಖ್ಯ

ಕೆ.ಆರ್.ಸಾಗರ : ಕೇವಲ ವಿದ್ಯೆಯಿಂದ ಎಲ್ಲವೂ ಸಾಧ್ಯವಿಲ್ಲ, ಮೊದಲು ಸಂಸ್ಕಾರ ಮುಖ್ಯ. ವಿದ್ಯೆ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.

ಹುಲಿಕೆರೆ ಗ್ರಾಮದ ಕೆ.ಆರ್.ಸಾಗರ ರಸ್ತೆಯಲ್ಲಿರುವ ಬಿ.ಜಿ.ಎಸ್. ಬಾಲಜಗತ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 10 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಚಾಲನೆ ನೀಡಿ ಮಾತನಾಡಿ, ವಿದ್ಯೆ ಕಲಿಸಿದ ಗುರುವನ್ನು ನಾವು ಮೀರಿಸಿ ಉತ್ತಮ ಸ್ಥಾನ ಗಳಿಸಬಹುದು, ಪಾಲಕರು ಮೊದಲು ಸಂಸ್ಕಾರ ಕಲಿಸಿದರೆ ಅಂತಹ ಮಗು ಸಮಾಜದಲ್ಲಿ ಸತ್ಪ್ರಜೆಯಾಗುತ್ತಾನೆ. ಪಾಲಕರು ವಿದ್ಯೆ ಜತೆಗೆ ಸಾಂಸ್ಕೃತಿಕ, ಕ್ರೀಡೆ ಇತರ ಚಟುವಟಿಕಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಿಶೋರ್‌ಕುಮಾರ್ ಮಾತನಾಡಿ, ವಿದ್ಯಾಭ್ಯಾಸ ನೀಡುವಲ್ಲಿ ಮಠಗಳ ಪಾತ್ರ ದೊಡ್ಡದು. ಮಕ್ಕಳಲ್ಲಿ ಶ್ರದ್ಧೆ ಮುಖ್ಯ, ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಇಂತಹ ವಾರ್ಷಿಕೋತ್ಸವ ಮಕ್ಕಳಿಗೆ ಉತ್ತಮ ವೇದಿಕೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜತೆಗೆ ಪಾಲಕರ ಪಾತ್ರ ಮುಖ್ಯ ಎಂದರು.

ಮುಖ್ಯ ಅತಿಥಿ ಸಾಹಿತಿ ಮಜ್ಜಿಗೆಪುರ ಶಿವರಾಂ ಮಾತನಾಡಿ, ಶಿಕ್ಷಣ ಎನ್ನುವುದು ಸೊನ್ನೆಯಿಂದ ಉತ್ತಮ ಸ್ಥಾನಕ್ಕೆ ಏರುವ ಶಕ್ತಿ. ಯಾವುದೇ ಕೊರತೆ ಎದುರಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯ. ಅದರಂತೆ ಮಕ್ಕಳಲ್ಲೂ ಕಲಿಕೆ ಬಗ್ಗೆ ಆಸಕ್ತಿಯಿರಬೇಕು. ನಮ್ಮ ಬಡತನ ಹೋಗಲಾಡಿಸಲು ಶಿಕ್ಷಣ ಮುಖ್ಯ. ಶಿಕ್ಷಣ ಪಡೆದ ಪ್ರತಿಯೊಬ್ಬರೂ ಈ ದೇಶದ ಸಂಪತ್ತು ಎಂದರು.

ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ.ಮಹೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆದಿಚುಂಚನಗಿರಿ ಮಠದ ವತಿಯಿಂದ ಆಂಗ್ಲ ಮಾಧ್ಯಮ ಶಾಲೆ ತೆರೆದು ಉತ್ತಮ ಶಿಕ್ಷಣ ನೀಡುತ್ತಿದೆ. ಈ ಭಾಗದಲ್ಲಿ ಮಧ್ಯಮ ವರ್ಗದ ಪಾಲಕರು ಕೂಡ ತಮ್ಮ ಮಕ್ಕಳಿಗೆ ಕಡಿಮೆ ದರದಲ್ಲಿ ಆಂಗ್ಲ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ಕೊಡಿಸಲು ಸಹಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ದೇಶ ಭಕ್ತಿ ಕುರಿತ ಭಗತ್ ಸಿಂಗ್ ಹಾಗೂ ಒನಕೆ ಓಬವ್ವನ ಕುರಿತ ನೃತ್ಯರೂಪಕ, ಪೂಜಾ ಕುಣಿತ, ಭೈರವ ಕುಣಿತ, ಕಾಳಿ ನೃತ್ಯ, ಅಯ್ಯಪ್ಪಸ್ವಾಮಿ ನೃತ್ಯರೂಪಕ, ಶಿವನ ನೃತ್ಯ ಸೇರಿದಂತೆ ಪುಟಾಣಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಶಾಲೆಯ 2024-25ನೇ ಸಾಲಿನ ಪಾಲಕರ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಸ್ವಾಮೀಜಿ ಬಹುಮಾನ ವಿತರಣೆ ಮಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಆಶಾ ಶಾಲೆಯ ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು.

ಕೆ.ಆರ್.ಸಾಗರ ಪೊಲೀಸ್ ಠಾಣೆಯ ಪಿಎಸ್‌ಐ ರಮೇಶ್ ಕರ್ಕಿಕಟ್ಟೆ, ಕೆ.ಆರ್.ಸಾಗರ ಗ್ರಾ.ಪಂ. ಅಧ್ಯಕ್ಷೆ ಶ್ರುತಿ ಶ್ರೀನಿವಾಸ್, ಉಪಾಧ್ಯಕ್ಷ ರವಿಶಂಕರೇಗೌಡ, ಸದಸ್ಯರಾದ ಶ್ರುತಿ ಯೋಗೇಶ್, ರವಿಕುಮಾರ್, ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಹುಲಿಕೆರೆ ಗ್ರಾ.ಪಂ. ಅಧ್ಯಕ್ಷೆ ಶ್ವೇತಾ ಕೃಷ್ಣ, ಸದಸ್ಯ ಕರೀಗೌಡ, ಬೆಳಗೊಳ ಹೋಬಳಿ ರಾಜಸ್ವ ನಿರೀಕ್ಷಕ ರೇವಣ್ಣ, ಸಿಆರ್‌ಪಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ರಘು, ಸಮಾಜ ಸೇವಕ ಶ್ರೀನಿವಾಸ್, ಮುಖ್ಯ ಶಿಕ್ಷಕಿ ಆಶಾ, ಕಚೇರಿ ವ್ಯವಸ್ಥಾಪಕ ಅಭಿ ಇತರರು ಇದ್ದರು.