ಜಿಲ್ಲೆ

ವೃತ್ತಿ ಜತೆಗೆ ಕುಟುಂಬದ ಯೋಗ ಕ್ಷೇಮಕ್ಕೂ ಆದ್ಯತೆ ಇರಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಹೆಮ್ಮೆ. ಅದರೊಂದಿಗೆ ನಮ್ಮ ಕುಟುಂಬಕ್ಕೂ ಆದ್ಯತೆ ನೀಡಬೇಕು. ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣಗಳಿಗೆ ಮಹತ್ವ ನೀಡಬೇಕು ಎಂದು ನಿವೃತ್ತ ಲೋಕಾಯುಕ್ತ ಪೊಲೀಸ್​ ಅಧೀಕ್ಷಕ ಶಂಕರ ರಾಗಿ ಹೇಳಿದರು.

ಜಿಲ್ಲಾ ಪೊಲೀಸ್​ ಇಲಾಖೆ ವತಿಯಿಂದ ನಗರದ ಮೀಸಲು ಪೊಲೀಸ್​ ಪಡೆಯ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್​ ಧ್ವಜ ದಿನಾಚರಣೆ ಮತ್ತು ನಿವೃತ್ತ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೊಲೀಸ್​ ಅಧಿಕಾರಿ, ಸಿಬ್ಬಂದಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಗೆ ತಕ್ಕ ಸೌಲಭ್ಯಗಳು ಸಿಗಬೇಕು. ಸರ್ಕಾರ ಪೊಲೀಸರ ಸಮಸ್ಯೆಗಳಿಗೆ, ಮೂಲ ಸೌಕರ್ಯಗಳಿಗೆ ಕಿವಿ ಆಗಬೇಕು. ನಮ್ಮನ್ನು ನಂಬಿರುವ ನಮ್ಮ ಕುಟುಂಬಕ್ಕೂ ನ್ಯಾಯ ಸಿಗುವಂತೆ ನಾವು ಗಮನ ಹರಿಸಬೇಕು. ಸೇವಾ ನಿವೃತ್ತಿ ನಂತರ ನಮ್ಮ ಯೋಗ ಕ್ಷೇಮ ನೋಡಿಕೊಳ್ಳುವವರು ನಮ್ಮ ಕುಟುಂಬದವರು. ಹೀಗಾಗಿ ಅವರತ್ತಲೂ ಗಮನ ನೀಡಬೇಕು ಎಂದರು.

ಇದಕ್ಕೂ ಪೂರ್ವದಲ್ಲಿ ವಿವಿಧ ಪರೇಡ್​ ತಂಡಗಳ ವಿಕ್ಷಣೆ ನಡೆಸಿ ಗೌರವ ಸ್ವೀಕರಿಸಿದರು. ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಚ್​.ಜಿ.ತಳವಾರ, ಎನ್​.ವೈ.ಗೊಂದಳಿ, ಎ.ಜಿ.ಹವಗಿ, ಕೆ.ಎಚ್​.ಕರ್ಜಗಿ, ಎಸ್​.ಕೆ. ನಾಗನಗೌಡರ, ಆರ್​.ಜೆ.ಪಂಗಳೇರ, ಎಲ್​.ಎಸ್​. ಮುತ್ತಿನ, ಎ.ಎಂ.ಅಂಬಿಗೇರ, ಆರ್​.ಎನ್​.ಗೋರಗುದ್ದಿ, ವಿ.ಎಸ್​. ಬೆಳಗಾಂಕರ, ಚಾಮುಂಡೇಶ್ವರಿ, ಎಂ.ಎಸ್​.ಅಂಚಿ, ಎಂ.ಎ.ಗೋಲಂದಾಜ, ಬಿ.ಎಸ್​.ಹುಬ್ಬಳ್ಳಿ, ಬಿ.ಎಂ. ಮಡಿವಾಳರ ಅವರಿಗೆ ಸನ್ಮಾನಿಸಲಾಯಿತು.

ಉಪ ಪೊಲೀಸ್​ ಅಧೀಕ ಎಸ್​.ಎಂ.ನಾಗರಾಜ, ಜಿಲ್ಲೆಯ ಎಲ್ಲ ಪೊಲೀಸ್​ ಠಾಣೆಗಳ ಅಧಿಕಾರಿ, ಸಿಬ್ಬಂದಿ, ಎಸ್​.ಪಿ.ಕಚೇರಿ ಅಧಿಕಾರಿ, ಸಿಬ್ಬಂದಿ, ನಿವೃತ್ತ ಪೊಲೀಸ್​ ಅಧಿಕಾರಿಗಳು, ಕುಟುಂಬಸ್ಥರು, ಇತರರು ಇದ್ದರು.

ಜಿಲ್ಲಾ ಪೊಲೀಸ್​ ಅಧೀಕ ಡಾ. ಗೋಪಾಲ ಬ್ಯಾಕೋಡ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಎನ್​.ವಿ.ಭರಮನಿ ವಂದಿಸಿದರು.