ಮೈಸೂರು: ನಗರದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆಯಿಂದ ಭಾನುವಾರ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ 140ನೇ ಜಯಂತ್ಯುತ್ಸವ ಆಚರಿಸಲಾಯಿತು.
ಸಂಸ್ಥೆ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ವಾದ್ಯ ವೃಂದದ ನಿವೃತ್ತ ಸಿತಾರ್ ವಾದಕರಾದ ಕಲಾವಿದ ಸಿ.ಸೋಮಣ್ಣ, ಆಲೂರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವೆಂಕಟರಾಯರು ನೀಡಿರುವ ಅಪಾರ ಸಾಧನೆಗಾಗಿ ಅವರನ್ನು ಕನ್ನಡ ಸಾಹಿತ್ಯ ಕುಲ ಪುರೋಹಿತ ಎಂದು ಕರೆಯಲಾಗಿದೆ ಎಂದು ಸ್ಮರಿಸಿದರು.
ಸಾಮಾಜಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅವರು 1921ರಲ್ಲಿ ಗಾಂಧಿ ಪ್ರಾರಂಭಿಸಿದ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಏಕೀಕರಣ, ಕರ್ನಾಟಕ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಯೋಜನೆಗಳಲ್ಲಿ ಅವರ ಪಾತ್ರವೂ ಇತ್ತು. ಪುಸ್ತಕ ಪ್ರಕಾಶಕರಿಗೆ ಅನುಕೂಲವಾಗಲಿ ಎಂದು ಕರ್ನಾಟಕ ಗ್ರಂಥ ಮಂಡಳಿಯನ್ನು ಸ್ಥಾಪಿಸಿದ ಕೀರ್ತಿಯೂ ಇವರದ್ದಾಗಿದೆ ಎಂದು ತಿಳಿಸಿದರು.
ಟ್ರಸ್ಟ್‌ನ ಖಜಾಂಚಿ, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಮಾತನಾಡಿ, ಆಲೂರರು 25ಕ್ಕೂ ಅಧಿಕ ಕೃತಿಗಳನ್ನು ರಚಿಸಿ, ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. 1930ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಇವರ ಸೇವೆಗೆ ಕನ್ನಡ ಜನತೆ ದೇಶ ಸೇವಾ ಧುರೀಣ ಹಾಗೂ ಸ್ವಭಾಷಾ ರಕ್ಷಕ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಹ್ಮಣ್ಯಂ, ಆಲೂರರ ಸಾಹಿತ್ಯ ಮತ್ತು ಜೀವನ ಚರಿತ್ರೆಯನ್ನು ಕುರಿತು ಮಾತನಾಡಿದರು. ಸಮಾಜ ಸೇವಕ ಎನ್.ಕೌಶಿಕ್ ಇದ್ದರು.