ಜಿಲ್ಲೆ

ನಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಅವಕಾಶ ನೀಡಿ

ಸರ್ಕಾರಕ್ಕೆ ನಗರಸಭಾ ಅಧ್ಯಕ್ಷ ಪೂಜಾರಿ ಆಗ್ರಹ

ಹೈಕೋರ್ಟ್​ ತೀರ್ಪಿನ ನಿರೀಕ್ಷೆಯಲ್ಲಿ ಸದಸ್ಯರು

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಜ್ಯದಲ್ಲಿ ಉಡುಪಿ ನಗರಸಭೆಯೂ ಸೇರಿದಂತೆ 40ಕ್ಕೂ ಅಧಿಕ ನಗರ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಯ ಅವಧಿ ಅಕ್ಟೋಬರ್​ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆದರೆ, ರಾಜ್ಯ ಕಾಂಗ್ರೆಸ್​ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಎರಡನೇ ಅವಧಿಗೆ ನಮಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಆಡಳಿತಾಧಿಕಾರಿ ನೇಮಿಸದೆ ಅವಧಿ ಪೂರ್ಣಗೊಳಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಆಗ್ರಹಿಸಿದ್ದಾರೆ.

ಉಡುಪಿಯ ನಗರಸಭೆಯಲ್ಲಿ ಮಂಗಳವಾರ (ಅ.28) ನಡೆದ ಸಾಮಾನ್ಯ ಸಭೆಯ ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿ, ಎರಡನೇ ಅವಧಿಗೆ ನಾನು ಉಡುಪಿ ನಗರಸಭೆಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೆ. ಆದರೆ, ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ನಿಗದಿ ಮಾಡಲು ಅನಗತ್ಯ ವಿಳಂಬ ಮಾಡಿದ್ದರಿಂದ ಲಭಿಸಿರುವ ಅಧಿಕಾರಾವಧಿಯನ್ನು ನಿಯಮದಂತೆ ಪೂರ್ಣಗೊಳಿಸಲು ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

16 ತಿಂಗಳು ಮೊಟಕು

ಐದು ವರ್ಷದ ಅವಧಿಯನ್ನು ಇಬ್ಭಾಗ ಮಾಡಿದ್ದರಿಂದ ಒಂದನೇ ಹಾಗೂ ಎರಡನೇ ಅವಧಿಗೆ ತಲಾ ಎರಡೂವರೆ ವರ್ಷ ಅಧಿಕಾರಾವಧಿ ಲಭಿಸಲಿದೆ. ಆದರೆ, ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲು ರಅಜ್ಯ ಸರ್ಕಾರ ಅನಗತ್ಯವಾಗಿ 16 ತಿಂಗಳು ವಿಳಂಬ ಮಾಡಿದೆ. ಹೀಗಾಗಿ 30 ತಿಂಗಳ ಅಧಿಕಾರದ ಅವಧಿಯಲ್ಲಿ ಕೇವಲ 14 ತಿಂಗಳು ಮಾತ್ರ ಲಭಿಸಿದ್ದು, ಉಳಿದ 16 ತಿಂಗಳು ಅಧಿಕಾರಾವಧಿ ತಪ್ಪಿ ಹೋಗಿದೆ ಎಂದು ಪೂಜಾರಿ ತಿಳಿಸಿದರು.

ಹೈಕೋರ್ಟ್​ ಮೊರೆ

ನಾನೂ ಸೇರಿದಂತೆ ರಾಜ್ಯದ 40ಕ್ಕೂ ಅಧಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಆಗಿರುವ ಸಮಸ್ಯೆ ಹಾಗೂ ಅನ್ಯಾಯದ ವಿರುದ್ಧ ಹೈಕೋರ್ಟ್​ಗೆ ದೂರು ನೀಡಿದ್ದೇವೆ. ಸರ್ಕಾರದಿಂದ ಮೀಸಲು ನಿಗದಿ ಮಾಡಲು 16 ತಿಂಗಳು ವಿಳಂಬ ಹಾಗೂ ಈ ಅವಧಿಯಲ್ಲಿ ಆಡಳಿತಾಧಿಕಾರಿ ನೇಮಿಸಿದ್ದರಿಂದ ಅದನ್ನು 5 ವರ್ಷದ ಅಧಿಕಾರಾವಧಿಗೆ ಜೋಡಿಸದಂತೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ಪ್ರಕ್ರಿಯೆಗೆ ಮುಂದಾಗದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದೇವೆ. ಅದರ ವಿಚಾರಣೆ ನಡೆಸಿರುವ ನ್ಯಾಯಾಧೀಶರು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸ್ಥಳೀಯ ಸಂಸ್ಥೆಗಳಿಗೆ ಯಾವಾಗ ಚುನಾವಣೆ ನಡೆಸುತ್ತೀರಿ ಎಂದು ಬುಧವಾರ (ಅ.29)ದೊಳಗೆ ನಿಲುವು ತಿಳಿಸಲು ಸೂಚಿಸಿ, ವಿಚಾರಣೆ ಮುಂದೂಡಿದೆ. ಹೀಗಾಗಿ ಸರ್ಕಾರದ ತೀರ್ಮಾನಕ್ಕೆ ಹಾಗೂ ಹೈಕೋರ್ಟ್​ ಇಂದು ನೀಡಲಿರುವ ತೀರ್ಪಿಗೆ ಎದುರು ನೋಡುತ್ತಿರುವುದಾಗಿ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.