ಜಿಲ್ಲೆ

ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಿ

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ


ಗೋಣಿಕೊಪ್ಪ: ಗೋಣಿಕೊಪ್ಪ ಮುಖ್ಯರಸ್ತೆ ಮತ್ತು ಬೈಪಾಸ್ ರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಜಂಟಿಯಾಗಿ ವಾಹನ ದಟ್ಟಣೆ ನಿಯಂತ್ರಿಸಲು ಯೋಜನೆ ರೂಪಿಸಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿ ಬಂದಿತು.


ಗೋಣಿಕೊಪ್ಪ ವಾಹನ ದಟ್ಟಣೆ ನಿಯಂತ್ರಣ ವಿಚಾರದಲ್ಲಿ ಮಂಗಳವಾರ ಸಿಲ್ವರ್‌ಸ್ಕೈ ಸಭಾಂಗಣದಲ್ಲಿ ಕನ್ನಡದ ನಂ.೧ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಬೈಪಾಸ್ ರಸ್ತೆ ಅಭಿವೃದ್ಧಿ ಹಿನ್ನೆಲೆ, ಮುಖ್ಯರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾಹನ ನಿಯಂತ್ರಣ, ಪಾರ್ಕಿಂಗ್ ನಿಯಮ ಪಾಲನೆಯಲ್ಲಿ ಆಗುತ್ತಿರುವ ಎಡವಟ್ಟಿನಿಂದ ಹೆಚ್ಚು ಸಮಸ್ಯೆಯಾಗುತ್ತಿದೆ. ವಾಹನ ದಟ್ಟಣೆ ಸಮಸ್ಯೆಗೆ ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸೂಕ್ತ ನಿಯಮ ರೂಪಿಸದಿರುವುದು ಮೂಲ ಕಾರಣವಾಗಿದೆ. ಟ್ರಾಫಿಕ್ ನಿಯಮ ಪಾಲಿಸದ ವಾಹನಕ್ಕೆ ದಂಡ ಪ್ರಯೋಗ, ಸೂಚನ ಫಲಕಗಳ ಮೂಲಕ ನಿಯಂತ್ರಿಸಲು ಸಾಧ್ಯವಿದೆ. ಬೈಪಾಸ್ ರಸ್ತೆ ಅಭಿವೃದ್ಧಿ ನಂತರವೂ ಎರಡು ರಸ್ತೆಗಳನ್ನು ದ್ವಿಮುಖ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.


ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ಹೊರಗಿನ ವ್ಯಾಪಾರಿಗಳು ವಾಹನ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ವಹನ ದಟ್ಟಣೆ ಹೆಚ್ಚಾಗಲು ಕಾರಣವಾಗುತ್ತಿದೆ. ಜನರು ವಾಹನ ನಿಲ್ಲಿಸಿ ಅಲ್ಲಿಯೆ ಖರೀದಿ ಮಾಡುತ್ತಾರೆ. ಇದರ ನಿಯಂತ್ರಣಕ್ಕೆ ಸ್ಥಳಿಯ ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದರು.


ಪೊನ್ನಂಪೇಟೆ ರಸ್ತೆ ಜಂಕ್ಷನ್‌ನಲ್ಲಿ ಬಸ್ ನಿಲುಗಡೆಗೆ ಅವಕಾಶವಿಲ್ಲ. ಇಲ್ಲಿ ಬಸ್ ನಿಲ್ಲಿಸುವುದರಿಂದ ಇಡೀ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಪೊಲೀಸ್ ಇಲಾಖೆ ಮಾಡಬೇಕಿದೆ. ರಸ್ತೆಯುದ್ದಕ್ಕೂ ವಾಹನ ನಿಲ್ಲಿಸಿಕೊಂಡು ಖರೀದಿ ಮಾಡುವ ವಾಹನಗಳ ವಿರುದ್ದ ದಂಡ ವಿಧಿಸಬೇಕು. ಸುಮ್ಮನೆ ಕಳುಹಿಸುವುದರಿಂದ ಸವಾರರಲ್ಲಿ ನಿಯಮ ಪಾಲಿಸಬೇಕೆಂಬ ಜವಬ್ದಾರಿ ಇಲ್ಲದಂತಾಗಿದೆ ಎಂದರು.


ಬಸ್ ನಿಲ್ದಾಣದ ಎದುರು ಇರುವ ಅರ‌್ವತೊಕ್ಲು ರಸ್ತೆಯ ಎರಡು ಕಡೆಗಳಲ್ಲಿ ಪಾರ್ಕಿಂಗ್ ಮಾಡುವುದರಿಂದ ಜನರಿಗೆ ನಡೆಯಲು ಆಗುತ್ತಿಲ್ಲ. ಪಾದಾಚಾರಿಗಳಿಗೆ ವಾಹನ ಅಪಘಾತವಾಗುವ ಆತಂಕವಿದೆ. ರಸ್ತೆ ಕಾಮಗಾರಿ ಮುಗಿಯುವವರೆಗೆ ಪಾರ್ಕಿಂಗ್ ತೆರವುಗೊಳಿಸಬೇಕು ಎಂದರು.


ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಸುಬ್ರಮಣಿ ಮಾತನಾಡಿ, ನಿತ್ಯ ೧ ಲಕ್ಷದಷ್ಟು ವಾಹನಗಳು ಗೋಣಿಕೊಪ್ಪಕ್ಕೆ ಬರುತ್ತವೆ. ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸ್ಥಳಿಯವಾಗಿ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ತೆರೆಯಬೇಕಿದೆ ಎಂದರು.


ಸ್ಥಳೀಯ ಗ್ರಾಮ ಪಂಚಾಯಿತಿ ತೆರಿಗೆ ಸಂಗ್ರಹಿಸಲು ತೋರುವ ಉತ್ಸುಕತೆಯನ್ನು ವಾಹನ ನಿಯಂತ್ರಣ ವಿಚಾರದಲ್ಲಿಯೂ ತೋರಬೇಕಿದೆ. ಅಂಗಡಿ ಎದುರು ಅನಾವಶ್ಯಕ ವಾಹನ ನಿಲುಗಡೆ, ಅಂಗಡಿಗೆ ಗ್ರಾಹಕರು ಬರಲಿ ಎಂದು ಅಡ್ಡವಾಗಿಟ್ಟಿರುವ ದ್ವಿಚಕ್ರ ವಾಹನಗಳ ತೆರವು, ದಿನವಿಡೀ ವಾಹನ ನಿಲುಗಡೆಯ ವಾಹನ ತೆರವು ಮಾಡಲು ನಿಯಮ ರೂಪಿಸಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಒತ್ತಾಯಿಸಿದರು.


ಟ್ರಾಫಿಕ್‌ಗೆ ಹೆದರಿ ಪೊನ್ನಂಪೇಟೆ, ಶ್ರೀಮಂಗಲ ಕಡೆಯ ಗ್ರಾಹಕರು ಕುಂದ ರಸ್ತೆ ಮೂಲಕ ವಿರಾಜಪೇಟೆಗೆ ತೆರಳುವಂತಾಗಿದೆ. ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸಲು ಹೋಂಗಾರ್ಡ್ಸ್ ಸೇವೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ರಸ್ತೆ ದ್ವಿಮುಖ ಸಂಚಾರದಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಶಾಲಾ ಸಮಯದಲ್ಲಿ ಹೆಚ್ಚು ಸಮಸ್ಯೆಯಾಗುತ್ತಿದೆ. ಸಮಯ ಪಾಲನೆ ಮಾಡಲು ಜನರು ಪರದಾಡುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಮುಂದಾಗಬೇಕು.
-ಮಾಳೇಟಿರ ಜಿ.ಮುತ್ತಣ್ಣ, ಉದ್ಯಮಿ, ಗೋಣಿಕೊಪ್ಪ

ಮುಖ್ಯರಸ್ತೆಯಲ್ಲಿ ಪಾದಾಚಾರಿಗಳು ಕೂಡ ನಡೆಯಲು ಆಗುತ್ತಿಲ್ಲ. ಫುಟ್‌ಪಾತ್ ಕಾಮಗಾರಿ ನಡೆಸುವುದು ಸೂಕ್ತ. ವಾಹನ ನಿಲುಗಡೆಗೆ ಸೂಕ್ತ ನಿಯಮ ಅವಶ್ಯಕತೆ ಇದೆ. ಸಂತೆ ದಿನ ಭಾನುವಾರ ಮಾರುಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರದಿಂದ ಮುಖ್ಯರಸ್ತೆ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಮಾರುಕಟ್ಟೆ ರಸ್ತೆಯಲ್ಲಿ ವಾಹನ ದನವಿಡೀ ಚಲಿಸಲು ಅವಕಾಶ ನೀಡಬೇಕು. ದ್ವಿಮುಖ ಸಂಚಾರ ಮುಖ್ಯರಸ್ತೆಗೆ ಅವಕಾಶ ನೀಡಬೇಕು.
-ವರಲಕ್ಷ್ಮಿ, ಸಾಮಾಜಿಕ ಕಾರ್ಯಕರ್ತೆ, ಗೋಣಿಕೊಪ್ಪ

ಎರಡು ರಸ್ತೆಗಳಲ್ಲಿ ದ್ವಿಮುಖ ಸಂಚಾರ ನಿಯಮ ಜಾರಿಗೆ ತರುವುದರಿಂದ ವ್ಯಾಪಾರಿ, ಸಾರ್ವಜನಿಕರು ಹಾಗೂ ಚಾಲಕರುಗಳಿಗೂ ತೊಂದರೆ ಇರುವುದಿಲ್ಲ. ಮುಖ್ಯರಸ್ತೆಯಲ್ಲಿರುವ ವ್ಯಾಪಾರಿಗಳಿಗೆ ವ್ಯಾಪಾರ ಕಡಿಮೆ ಎಂಬ ದೂರಿಗೂ ಸ್ಪಂದನೆ ನೀಡಿದಂತಾಗುತ್ತದೆ.
-ಎಂ.ಎಸ್.ಸುಬ್ರಮಣಿ, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪ

ಚೇಂಬರ್ ಆಫ್ ಕಾಮರ್ಸ್ ಸಭೆಗಳಲ್ಲಿ ಪಟ್ಟಣದ ವಾಹನ ದಟ್ಟಣೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಇದರಂತೆ ೩ ವರ್ಷಗಳ ಹಿಂದೆ ಒಂದು ತಿಂಗಳ ಅವಧಿಗೆ ಮುಖ್ಯರಸ್ತೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಇದರಂತೆ ಏಕಮುಖ ಸಂಚಾರ ನಿಯಮವನ್ನು ಅನುಷ್ಠಾನಗೊಳಿಸಲಾಗಿತ್ತು. ಇದೀಗ ಎಲ್ಲರಿಗೂ ತೊಂದರೆ ಎಂಬ ಕಾರಣಕ್ಕೆ ನಿಯಮ ಹಿಂಪಡೆಯಲು ಮನವಿ ಮಾಡಿಕೊಳ್ಳಲಾಗುತ್ತಿದೆ. ದ್ವಿಮುಖ ಸಂಚಾರ ಉತ್ತಮ ಎಂಬ ಅಭಿಪ್ರಾಯಕ್ಕೆ ಸ್ಪಂದಿಸಬೇಕಿದೆ.
-ಕಡೇಮಾಡ ಸುನಿಲ್ ಮಾದಪ್ಪ, ಅಧ್ಯಕ್ಷರು, ಚೇಂಬರ್ ಆಫ್ ಕಾಮರ್ಸ್, ಗೋಣಿಕೊಪ್ಪ