ತರೀಕೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಗುರುವಾರ ಮಿನಿ ವಿಧಾನಸೌಧದ ಎದುರು ಮುಷ್ಕರ ನಡೆಸಿ ಎಸಿ ಡಾ. ಕೆ.ಜೆ.ಕಾಂತರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗ್ರಾಮ ಆಡಳಿತಾಧಿಕಾರಿ ಸಂಘದ ತಾಲೂಕು ಅಧ್ಯಕ್ಷ ಎಲ್.ಕೆ.ಶಿವಣ್ಣ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳು ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸಿ ವೃಂದದ ನೌಕರರಿಗಿಂತ ಹೆಚ್ಚು ಜವಾಬ್ದಾರಿ ನಿರ್ವಹಿಸುವಂತಾಗಿದೆ. ಹೀಗಾಗಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು. ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಈವರೆಗೆ ಆಗಿರುವ ಎಲ್ಲ ಅಮಾನತುಗಳನ್ನು ರದ್ದುಪಡಿಸಬೇಕು. ಕೆಸಿಎಸ್‌ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರುವುದಷ್ಟೇ ಅಲ್ಲ, ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಆದೇಶ ನೀಡಬೇಕು. ಅಂತರ ಜಿಲ್ಲಾ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಗೆ ಅವಕಾಶ ನೀಡುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಆಡಳಿತಾಧಿಕಾರಿ ಸಂಘದ ತಾಲೂಕು ಕಾರ್ಯದರ್ಶಿ ಕೆ.ಆರ್.ಧನಂಜಯ್, ಖಜಾಂಚಿ ಪುಷ್ಪಾಬಾಯಿ, ಪದಾಧಿಕಾರಿಗಳಾದ ಶ್ರೀಧರ್, ಲಕ್ಷ್ಮಣ್‌ನಾಯ್ಕ, ಟಿ.ಸಿ.ವೀಣಾ, ಸಹನಾ, ವಿಠ್ಠಲ್ ಪೂಜಾರಿ, ನಸೀಮಾ, ನಾಗರಾಜ್, ಪೂಜಾ ಇತರರಿದ್ದರು.