ಕೆ.ಆರ್.ಸಾಗರ: ಕೆ.ಆರ್.ಸಾಗರ ಸಂತೆಮಾಳದಿಂದ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರ ಕಚೇರಿವರೆಗೆ ಬುಧವಾರ ಕ್ವಾರಿ ಕೆಲಸಗಾರರು ಮತ್ತು ಮಾಲೀಕರು ಟ್ರಯಲ್ ಬ್ಲಾಸ್ಟ್ ಗೆ ಅನುಮತಿ ನೀಡುವಂತೆ ಘೋಷಣೆ ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರೈತ ಬಣದ ಸಂಸ್ಥಾಪಕ ಅಧ್ಯಕ್ಷ ಇಂಗಲಕುಪ್ಪೆ ಕೃಷ್ಣೇಗೌಡ ಮಾತನಾಡಿ, ಕೆ.ಆರ್.ಸಾಗರ ಅಣೆಕಟ್ಟೆಯ ಭದ್ರತೆ ಮುಖ್ಯವಾಗಿದೆ. ಆದರೆ ಗಣಿಗಾರಿಕೆ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿದ್ದು, ಕೋರ್ಟ್ ಆದೇಶದಂತೆ ಟ್ರಯಲ್ ಬ್ಲಾಸ್ಟ್ ನಡೆಸಿ, ಮುಂದೆ ತಜ್ಞರ ಅಭಿಪ್ರಾಯದಂತೆ ಕ್ರಮ ತೆಗೆದುಕೊಳ್ಳಬೇಕು. ಟ್ರಯಲ್ ಬ್ಲಾಸ್ಟ್ ನಡೆಸದಂತೆ ವಿರೋಧಿಸುತ್ತಿರುವವರು ಕಾನೂನಿನ ಅರಿವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಅಣೆಕಟ್ಟೆ ಸುರಕ್ಷತೆ ನಮ್ಮಲ್ಲರ ಜವಾಬ್ದಾರಿಯಾಗಿದೆ. ಅಣೆಕಟ್ಟೆ ಸುರಕ್ಷತೆಯಿಂದ ಗಣಿಗಾರಿಕೆ ನಿಷೇಧ ಮಾಡಲಾಗಿದ್ದು, ಇದೀಗ ನ್ಯಾಯಾಲಯ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ತಿಳಿಸಿದೆ. ಅದರಂತೆ ಟ್ರಯಲ್ ಬ್ಲಾಸ್ಟ್ ನಡೆಸಬೇಕು. ಇದರ ಫಲಿತಾಂಶದ ಮೇಲೆ ತಜ್ಞರು ಮುಂದಿನ ತೀರ್ಮಾನ ಕೈಗೊಳ್ಳಲಿ ಎಂದರು.
ಸಂಘದ ಗೌರವಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್, ಹೊಸ ಉಂಡವಾಡಿ, ರಾಮೇಗೌಡ, ಕುಮಾರ್ ಸ್ವಾಮಿ, ಕೆ.ಆರ್.ಎಸ್ ಹರೀಶ್, ರಾಧಾ ಮಲಿಕ್, ನಾಗಣ್ಣ, ಕೆಂಪರಾಜು ಸೇರಿದಂತೆ ಸಂಘಟೆನೆಗಳ ಕಾರ್ಯಕರ್ತರು, ಕ್ವಾರಿ ಕೆಲಸಗಾರರು, ಮಾಲೀಕರು ಇದ್ದರು.