ಜಿಲ್ಲೆ

ಮಕ್ಕಳಿಗೆ ಆಟಕ್ಕೆ ನೀಡಿ ಅವಕಾಶ : ವಸತಿ ನಿಲಯದ ಅಧಿಕಾರಿಗಳಿಗೆ ಡಾ.ತಿಪ್ಪೆಸ್ವಾಮಿ ಸೂಚನೆ: ಭಾನುವಾರ ತರಗತಿ ಬೇಡ

ಸೌಮ್ಯ ಆರ್

ಬೆಳ್ತಂಗಡಿ: ಮಕ್ಕಳ ರಕ್ಷಣೆ ಮತ್ತು ಅವರಿಗೆ ಮೂಲಸೌಲಭ್ಯ ಒದಗಿಸಲು, ಅವರ ಸ್ವಾತಂತ್ರ್ಯದ ಬಗ್ಗೆ 2016ರಲ್ಲಿ ಜಾರಿಯಾಗಿರುವ ಕಾನೂನು ಇನ್ನೂ ಅನುಷ್ಠಾನ ಆಗಿಲ್ಲ. ಮುಂದಿನ 6 ತಿಂಗಳಲ್ಲಿ ಜಾರಿಗೊಳಿಸಲು ಹೈಕೋರ್ಟ್ ಆದೇಶ ಮಾಡಿದೆ. ಇಂದು ವಿದ್ಯಾರ್ಥಿ ನಿಲಯಗಳಲ್ಲಿ ಅಂಕದ ನೆಪದಲ್ಲಿ ಭಾನುವಾರವೂ ತರಗತಿ ನಡೆಯುವ ಬಗ್ಗೆ ಮಕ್ಕಳು ಆಯೋಗದ ಮುಂದೆ ದೂರು ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯ ಮತ್ತು ಮಾನಸಿಕ ಶಕ್ತಿಗೆ ಶಿಕ್ಷಣದಷ್ಟೆ ಆಟವೂ ಅಗತ್ಯ. ಈ ಬಗ್ಗೆ ವಸತಿ ನಿಲಯಗಳ ಅಧಿಕಾರಿಗಳು ಗಮನ ಹರಿಸಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಡಾ.ತಿಪ್ಪೆಸ್ವಾಮಿ ಹೇಳಿದರು.

ಗುರುವಾರ ತಾಲೂಕು ಕಚೇರಿಯಲ್ಲಿ ಮಕ್ಕಳ ಸಮಸ್ಯೆ ಮತ್ತು ಅವರ ರಕ್ಷಣೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ತಾಲೂಕಿನಲ್ಲಿರುವ ಹಾಸ್ಟೆಲ್‌ಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕೇಳಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳ ವಿಶೇಷ ಕಾಳಜಿ ಅಗತ್ಯ. ತಹಸೀಲ್ದಾರ್ ತಿಂಗಳಿಗೆ ಎರಡು ದಿನ ಶಾಲೆ, ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡಬೇಕು. ಪೊಲೀಸ್ ಇಲಾಖೆಯವರು ಪ್ರತಿ ಗುರುವಾರ ಪೊಲೀಸ್ ಮನೆ ಕಾರ್ಯಕ್ರಮ ಕಡ್ಡಾಯ ಮಾಡಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಸೂಚಿಸಿದರು. ಮಕ್ಕಳ ಸಮಿತಿ ಸಭೆಯಲ್ಲಿ ಪೊಲೀಸ್ ಇಲಾಖೆ ಹಾಜರಾತಿ ಇಲ್ಲದಿರುವ ಬಗ್ಗೆ ದೂರುಗಳು ಬಂದಿವೆ. ಮುಂದೆ ಈ ರೀತಿ ಆಗದಂತೆ ನೊಡಿಕೊಳ್ಳಬೇಕು ಎಂದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಸತಿ ನಿಲಯದ ಮಕ್ಕಳ ಸಂಪೂರ್ಣ ಮಾಹಿತಿ ಇರಬೇಕು. ಪಂಚಾಯಿತಿ ಅಧಿಕಾರಿಗಳು ಕಾಟಾಚಾರದ ವರದಿ ನೀಡಬಾರದು. ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಇದರ ಜವಾಬ್ದಾರಿ ವಹಿಸಬೇಕು ಎಂದರು.

ಹಿಂದುಳಿದ ವಸತಿ ನಿಲಯದ ಅಧಿಕಾರಿ ಜೋಸೆಪ್ ಮಾಹಿತಿ ನೀಡಿ 14 ವಸತಿ ನಿಲಯಗಳ ಪೈಕಿ ಗೇರುಕಟ್ಟೆ ಮತ್ತು ಕಣಿಯೂರು ವಸತಿ ನಿಲಯ ಮುಚ್ಚಲ್ಪಟ್ಟಿದೆ. ಉಳಿದವು ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದರು. ದ.ಕ ಜಿಲ್ಲೆಗೆ ಹೊರಗಿನ ಮಕ್ಕಳು ಹೆಚ್ಚಾಗಿ ಬರುತ್ತಾರೆ. ಜಿಲ್ಲೆಯ ಮಕ್ಕಳು ವಸತಿ ನಿಲಯದಲ್ಕಿ ಉಳಿಯುವುದು ವಿರಳ ಎಂದರು. ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಆಯೋಗದ ಜಿಲ್ಲಾ ಅಧಿಕಾರಿ ಕುಮಾರ್, ಮಹಿಳಾ ಮಕ್ಕಳ ಅಧಿಕಾರಿ ಪ್ರಿಯಾ ಅಗ್ನೇಶ್ ಉಪಸ್ಥಿತರಿದ್ದರು.

ಕಾಟಾಚಾರದ ಸಭೆ ಬೇಡ

ಮಕ್ಕಳ ಗ್ರಾಮಸಭೆ ಕಾಟಾಚಾರಕ್ಕೆ ನಡೆಯಬಾರದು. ಅಧಿಕಾರಿಗಳಲ್ಲಿ ಮಕ್ಕಳು ಭಯಮುಕ್ತರಾಗಿ ಪ್ರಶ್ನೆ ಕೇಳುವಂತಾಗಬೇಕು. ಅವರ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು. ಆಯೋಗ ಪ್ರತಿ ಸಭೆಯ ವರದಿಯನ್ನು ಪರಿಶೀಲಿಸುತ್ತದೆ. ಕಾರ್ಮಿಕ ಇಲಾಖೆಯಲ್ಲಿ ಮಕ್ಕಳ ಬಗ್ಗೆ ಬಾಲಕಾರ್ಮಿಕ ಬಗ್ಗೆ ಎಷ್ಟು ಪ್ರಕರಣ ದಾಖಲಾಗಿದೆ? ಆರೋಗ್ಯ ಇಲಾಖೆಯಲ್ಲಿ ಎಷ್ಟು ಶಿಶು ಮರಣ, ತಾಯಿ ಮರಣ ಆಗಿದೆ? ಇದಕ್ಕೆ ಕಾರಣ ಏನು? ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ಕೇಳಿದರು.