ವಿಜಯಪುರ: ನಗರ ಹೊರವಲಯದ ಇಟ್ಟಂಗಿಹಾಳ ಬಳಿ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆ ಘಟಕ ಸ್ಥಾಪಿಸಲು 10 ಎಕರೆ ಜಮೀನು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಘೋಷಿಸಿದರು.
ಇಲ್ಲಿನ ಶ್ರೀ ಸಿದ್ಧೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಆಯೋಜಿಸಿರುವ ಮೈಸೂರು ಸ್ಯಾಂಡಲ್ ಸಾಬೂನು ಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಟ್ಟಂಗಿಹಾಳ ಬಳಿ 10 ಎಕರೆ ಜಮೀನು ನೀಡಲು ಸಮ್ಮತವಿದ್ದು, ಒಂದೆರಡು ದಿನಗಳಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೈಸೂರು ಮಹಾರಾಜರು ನೀರಾವರಿಗಾಗಿ ಕೆಆರ್‌ಎಸ್ ಅಣೆಕಟ್ಟೆ, ಕೈಗಾರಿಕೆಗಾಗಿ ಕೆಎಸ್‌ಡಿಎಲ್ ಮತ್ತು ಶಿಕ್ಷಣಕ್ಕಾಗಿ ನಾನಾ ಸಂಸ್ಥೆಗಳನ್ನು ಪ್ರಾರಂಭಿಸಿ ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಅವರು ಪ್ರಾರಂಭಿಸಿರುವ ಮೈಸೂರು ಸ್ಯಾಂಡಲ್ ಸೋಪ್ ಜಗತ್ತಿನಾದ್ಯಂತ ಜನಪ್ರೀಯತೆ ಹೊಂದಿದೆ. ಈ ಹಿಂದೆ ರಾಜ್ಯದ ಜನರ ಮನಗಳಲ್ಲಿ ಸ್ಥಾನ ಪಡೆದಿದ್ದ ಸಾಬೂನು ಇತ್ತೀಚೆಗೆ ಗೊಂದಲದಿಂದಾಗಿ ಅಪಖ್ಯಾತಿ ಪಡೆದಿತ್ತು. ನಾನು ಸಚಿವನಾದ ನಂತರ ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಸುಮಾರು 20 ಹೊಸ ಉತ್ಪನ್ನಗಳನ್ನು ಹೊರ ತಂದು ಸಂಸ್ಥೆಯನ್ನು ಗತವೈಭವಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ರಾಜ್ಯದ ಕಿರಾಣಿ ಅಂಗಡಿಗಳಿಂದ ಹಿಡಿದು ದೇಶ, ವಿದೇಶಗಳಲ್ಲಿ ನಮ್ಮ ಮಳಿಗೆ ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ. ನಮ್ಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಲಾ ಲೋಕ ಸ್ಥಾಪಿಸಿ ಅಲ್ಲಿ ಈ ಉತ್ಪನ್ನಗಳನ್ನು ಪರಿಚಯಿಸಲಾಗುವುದು ಎಂದರು.
ಕೆಎಸ್‌ಡಿಎಲ್ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ನಾಡಗೌಡ ಮಾತನಾಡಿ, ಇಂದಿನ ಪೈಪೋಟಿಯ ಯುಗದಲ್ಲಿ ಗುಣಮುಟ್ಟದ ಉತ್ಪನ್ನಗಳನ್ನು ಪರಿಚಯಿಸಿ, ಮನೆಮನೆಗೆ ತಲುಪಿಸುವ ಮೂಲಕ ಇತರ ಕಂಪೆನಿಗಳಿಗೆ ಸೆಡ್ಡು ಹೊಡೆಯಬೇಕು. ಜಾತ್ರೆ, ಸಾಂಸ್ಕೃತಿಕ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಬೂನು ಮೇಳ ಆಯೋಜಿಸಿ ರಿಯಾಯಿತಿ ದರದಲ್ಲಿ ಸಾಬೂನು ಮಾರಾಟ ಮಾಡಬೇಕು. ಈ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳ ಪ್ರಚಾರಕ್ಕೆ ಪ್ರತಿಯಾಗಿ ನಮ್ಮ ವಸ್ತುಗಳ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರು.
ಮೈಸೂರು ಸ್ಯಾಂಡಲ್ ಸೋಪ್‌ನ ಗುಣಮಟ್ಟ ಎಂದೂ ಬದಲಾಗಿಲ್ಲ. ಅಗರಬತ್ತಿ, ಸೌಂದರ್ಯವರ್ಧಕ ವಸ್ತುಗಳು, ಬಟ್ಟೆ ತೊಳೆಯುವ ಸಾಬೂನು, ಧೂಪ್, ಸಾಮ್ರಾಣಿ ಸೇರಿದಂತೆ ಇನ್ನೂ ಹೆಚ್ಚು ಹೊಸ ಉತ್ಪನ್ನಗಳ ಪರಿಚಯಕ್ಕೆ ಸಚಿವ ಎಂ.ಬಿ. ಪಾಟೀಲರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ವಿಜಯಪುರದಲ್ಲಿ ಕೆಎಸ್‌ಡಿಎಲ್ ಘಟಕ ಸ್ಥಾಪಿಸುವ ಸಚಿವ ಎಂ.ಬಿ. ಪಾಟೀಲರ ನಿರ್ಧಾರ ಸ್ವಾಗತಾರ್ಹ. ಇದರಿಂದ 400 ಯುವಕರಿಗೆ ಉದ್ಯೋಗ ಸಿಗಲಿದೆ. ಇಂದು ನೀರಾವರಿಯಿಂದಾಗಿ ಜಿಲ್ಲೆ ಅಭಿವೃದ್ಧಿಯಾಗಿದೆ. ಮುಂದಿನ ವರ್ಷದಲ್ಲಿ ವಿಜಯಪುರದಲ್ಲಿಯೇ ರಾಜ್ಯದಲ್ಲಿ ಅತೀ ಹೆಚ್ಚು ಮೈಸೂರು ಸ್ಯಾಂಡಲ್ ಸೋಪ್ ಮಾರಾಟದಲ್ಲಿ ಮುಂಚೂಣಿಯಲ್ಲಿರಲಿದೆ. ನಾವು ಸಹ ಈ ಉತ್ಪನ್ನಗಳ ಪ್ರಚಾರ ಮಾಡುತ್ತೇವೆ ಎಂದರು.
ನಾಗಠಾಣ ಶಾಸಕ ವಿಠಲ ಕಟಕದೊಂಡ ಮಾತನಾಡಿದರು. ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ ಪಿ.ಕೆ.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್‌ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ರಿಷಿ ಆನಂದ, ಆಡಳಿತ ಮತ್ತು ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಎಂ. ಗಂಗಪ್ಪ, ಬೆಂಗಳೂರು ಕಚೇತಿಯ ಅಕೌಂಟ್ಸ್ ಮ್ಯಾನೇಜರ್ ರುದ್ರೇಶ ಬಿ.ಕೆ, ಕಿರಿಯ ಅಧಿಕಾರಿ ವಿಜಯಮಹಾಂತೇಶ ಕಾಮತ, ಮುಖಂಡರಾದ ಸಂಗು ಸಜ್ಜನ, ಗುರು ಗಚ್ಚಿನಮಠ, ರಾಜು ಮಗಿಮಠ, ಎಂ.ಎಸ್. ಕರಡಿ ಮತ್ತಿತರರಿದ್ದರು.