ಬೇಲೂರು: ತಾಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲಿನ ಸರ್ಕಾರಿ ಭೂಮಿಗಾಗಿ 875 ಜನರು ನಿರಂತರ ಹೋರಾಟ ಮಾಡುತಿದ್ದು, ಸರ್ಕಾರ ಶೀಘ್ರವೇ ಭೂಮಿ ಮಂಜೂರು ಮಾಡಿ ದಾಖಲಾತಿ ನೀಡಬೇಕು. ಇಲ್ಲದಿದ್ದಲ್ಲಿ ಹಾಸನ-ಚಿಕ್ಕಮಗಳೂರು ಹೆದ್ದಾರಿ ರಸ್ತೆ ಸಂಚಾರ ತಡೆದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಷ್ಟ್ರೀಯ ರೈತ ಸಂಘದ ಉಸ್ತುವಾರಿ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಹೇಳಿದರು.
ಹಳೇಬೀಡು ಹೋಬಳಿ ಐದಳ್ಳ ಕಾವಲಿನ ಸರ್ವೇ 1 ರಲ್ಲಿ 2555 ಎಕರೆ ಭೂಮಿಯನ್ನು ರೈತರು ಉಳುಮೆ ಮಾಡಿದ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳು ಅವರ ಮೇಲೆ ದೌರ್ಜನ್ಯ ನಡೆಸಿ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದೆಂದು ರೈತರನ್ನು ಒಕ್ಕಲೆಬ್ಬಿಸಿದ್ದರು. ಆದರೆ ರಾಷ್ಟ್ರೀಯ ರೈತ ಸಂಘ ಐದಳ್ಳ ಕಾವಲಿಗೆ ತೆರಳಿ ರೈತರಿಗೆ ಧೈರ್ಯ ತುಂಬಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸಿ ಅಧಿಕಾರಿಗಳನ್ನು ಅಲ್ಲಿಂದ ಓಡಿಸಲಾಗಿದೆ. ಆದರೂ ಅರಣ್ಯ ಇಲಾಖೆಯವರು ಇಂದಿಗೂ ಭೂಮಿ ನಮ್ಮದು ಎನ್ನುತ್ತಾರೆ. ಪಹಣಿಯಲ್ಲಿ ಸರ್ಕಾರಿ ಎಂದು ಬರುತ್ತಿದೆ. ಸುಪ್ರೀಂಕೋರ್ಟ್ ಮತ್ತು ಕೆಲ ನ್ಯಾಯಾಲಯಗಳು ಸರ್ಕಾರಿ ಭೂಮಿಯನ್ನು ರೈತರಿಗೆ ನೀಡಬೇಕೆಂದು ಆದೇಶ ನೀಡಿದೆ. ಇದೇ ವಿಚಾರವಾಗಿ ಕಳೆದ ಮೂರು ದಿನದ ಹಿಂದೆ ಮಾಜಿ ಸಚಿವ ಬಿ.ಶಿವರಾಮ್, ಸರ್ಕಾರಿ ಭೂಮಿಯನ್ನು ರೈತರಿಗೆ ನೀಡಬೇಕೆಂದು ಹೇಳಿರುವುದು ನಮಗೆ ಶಕ್ತಿ ಬಂದಂತಾಗಿದೆ. ಈ ಜಮೀನು ಉಳಿಸಲು ಈಗಾಗಲೇ ಆರು ಸಲ ಪಾದಯಾತ್ರೆಯಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರಿಗೆ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ಗೂ ಮನವಿ ಮಾಡಿದರೂ ಪ್ರಯೋಜವಾಗಿಲ್ಲ, ಅಧಿಕಾರಿಗಳು ಭೂರಹಿತ ರೈತರಿಗೆ ಭೂಮಿ ನೀಡಲು ಸರ್ಕಾರ ನಾಟಕ ಮಾಡುತ್ತಿದೆ. ರೈರಿಗೆ ಜಮೀನು ಕೊಡದಿದ್ದಲ್ಲಿ ಹಾಸನ-ಚಿಕ್ಕಮಗಳೂರು ಹೆದ್ದಾರಿ ರಸ್ತೆ ತಡೆದು ಉಗ್ರ ಪ್ರತಿಭಟನೆ ಹಾಗೂ ಮುಂದಿನ ಸ್ಥಳೀಯ ಚುನಾವಣೆ ಭಹಿಷ್ಕರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ರೈತ ಸಂಘದ ರಾಜ್ಯ ಸಂಚಾಲಕ ಆಯೂಬ್ ಪಾಷ, ರಾಜ್ಯ ಕಾರ್ಯಾಧ್ಯಕ್ಷ ಏಜಾಜ್ ಪಾಷ, ಮಹಿಳಾ ಅಧ್ಯಕ್ಷೆ ನಂಜಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ದಸ್ತಗೀರ್, ರೈತ ಮುಖಂಡ ಅಬ್ದುಲ್ ಕುಂಜಿ ಇದ್ದರು.