ಲಿಂಗಸುಗೂರಿನಲ್ಲಿ ಎಸಿ ಎಫ್‌ಡಿಎ ಅನುಪಮಾ ಸಿಂಗ್‌ಗೆ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಹನುಮಂತ ನಾಯಕ, ಪ್ರಕಾಶ ಕುರಿ, ಪ್ರವೀಣ್ ನಿಲೋಗಲ್, ನಿಂಗಪ್ಪ ರಾಮಲೂಟಿ, ಆದಪ್ಪ ನಾಯಕ ಇತರರಿದ್ದರು. 
ಜಿಲ್ಲೆ

ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಿ

ಲಿಂಗಸುಗೂರು: ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ನಿಲೋಗಲ್ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಮಂಗಳವಾರ ಎಸಿ ಕಚೇರಿ ಎಫ್‌ಡಿಎ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.

ನಿಲೋಗಲ್ ಗ್ರಾಮದಲ್ಲಿ ಈ ಹಿಂದೆ ಖಾಸಗಿ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ, ಈಗ ಭೂ ಮಾಲೀಕರು ಅವಕಾಶ ನೀಡುತ್ತಿಲ್ಲ. ಇದರಿಂದ ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಶವಸಂಸ್ಕಾರಕ್ಕೆ ತೊಂದರೆ ಅನುಭವಿಸುವಂತಾಗಿದೆ.

ಈ ಬಗ್ಗೆ ದಲಿತ ಸಂಘಟನೆಗಳು ಹಲವಾರು ಬಾರಿ ಮನವಿ ಸಲ್ಲಿಸಿದರೂ ತಾಲೂಕು ಆಡಳಿತ ಸ್ಪಂದಿಸಿಲ್ಲ. ಗ್ರಾಮಸ್ಥರ ಪರಿಸ್ಥಿತಿ ಅರಿತು ಪ್ರಭುಲಿಂಗ ರುದ್ರಪ್ಪ ಎನ್ನುವವರು ಸರ್ವೇ ನಂ. 268 ರಲ್ಲಿ 10 ಎಕರೆ 24 ಗುಂಟೆ ಜಮೀನಿನಲ್ಲಿ ಸ್ಮಶಾನಕ್ಕೆ ಬೇಕಾಗುವಷ್ಟು ಭೂಮಿ ಕೊಡಲು ಮುಂದಾಗಿದ್ದಾರೆ. ಅಗತ್ಯ ಅನುದಾನ ಬಿಡುಗಡೆ ಮಾಡಿ ಜಾಗ ಪಡೆಯಲು ಸರ್ಕಾರ ಮುಂದಾಗಬೇಕು. ಸ್ಮಶಾನ ಇಲ್ಲದ ಊರುಗಳನ್ನು ಗುರುತಿಸಿ ಭೂಮಿ ಮಂಜೂರು ಮಾಡಬೇಕು. ನಿರ್ಲಕ್ಷಿಸಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೇನೆ ತಾಲೂಕು ಅಧ್ಯಕ್ಷ ಹನುಮಂತ ನಾಯಕ, ಪ್ರಕಾಶ ಕುರಿ, ಪ್ರವೀಣ್ ನಿಲೋಗಲ್, ನಿಂಗಪ್ಪ ರಾಮಲೂಟಿ, ಆದಪ್ಪ ನಾಯಕ ಗುರುಗುಂಟಾ, ಅಮರೇಗೌಡ, ಶಿವು ರೆಡ್ಡಿ, ಆದಪ್ಪ ಭೂಪೂರ, ಮಲ್ಲೇಶ ನಾಯಕ, ರಾಯಪ್ಪ ನಾಯಕ, ರಾಜಾಸಾಬ್, ಬಸವ ನಾಯಕ, ಸಲೀಂ ಪಾಷಾ, ಪ್ರಜ್ವಲ್ ನಾಯಕ ಇತರರಿದ್ದರು.