ಮಂಡ್ಯ: ಜಗತ್ತಿನಲ್ಲಿ ಸ್ನೇಹ ಮತ್ತು ಸೇವೆಯೇ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳ ಮುಖ್ಯಧ್ಯೇಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಕ್ಲಬ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿರುವ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರನ್ಯಾಷನಲ್ ಜಿಲ್ಲಾ ಕಚೇರಿಯಲ್ಲಿ ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಸೇವಾ ಚಟುವಟಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾಗತೀಕವಾಗಿ ಸಾಕಷ್ಟು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳು ಇವೆ. ಅವುಗಳಲ್ಲಿ ಭಾರತದಲ್ಲಿ ಹುಟ್ಟಿ ವಿದೇಶಗಳಲ್ಲಿ ಪ್ರವರ್ಧಮಾನವಾಗಿ ಬೆಳೆಯುತ್ತಿರುವ ಏಕೈಕ ಸಂಸ್ಥೆ ಅಲಯನ್ಸ್ ಎಂದು ನುಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಅಲಯನ್ಸ್ ಸಂಸ್ಥೆಗಳು ಪರಿಸರ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ಅನ್ನದಾಸೋಹ, ಅಗತ್ಯಯುಳ್ಳವರಿಗೆ ನೆರವು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಹಾಯಧನ, ಸಾಧಕರಿಗೆ ಅಭಿನಂದನೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಜಾಗೃತಿ ಅಭಿಯಾನ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಏ.6ರಂದು ಮದ್ದೂರಿನಲ್ಲಿ ಅಲಯನ್ಸ್ ಸಂಸ್ಥೆಯಿಂದ ಜಿಲ್ಲಾಮಟ್ಟದ ಸೇವಾಚಟುವಟಿಕೆಗಳ ತರಬೇತಿ ಸಮಾರಂಭ ನಡೆಯಲಿದೆ. ಎಲ್ಲ ಸದಸ್ಯರು ಮತ್ತು ಹೊಸ ಸದಸ್ಯತ್ವ, ನಾಯಕತ್ವ, ಸ್ನೇಹ, ಸೇವೆ, ಸಮಾಜಮುಖಿ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಶಿವಕುಮಾರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪ್ರಾಂತಪಾಲರಾಗಿ ಉತ್ತಮ ಸೇವೆ ಸಲ್ಲಿಸಿದ ಕೆ.ಟಿ.ಹನುಮಂತು ಅವರು ಸೌತ್ ಮಲ್ಟಿಪಲ್ ಛೇರ‌್ಮನ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. 48 ಜಿಲ್ಲೆಗೆ ಇವರ ಸೇವಾ ಅಧಿಕಾರ ಇರುತ್ತದೆ. ಈ ಒಂದು ಅವಕಾಶ ಮಂಡ್ಯ ಜಿಲ್ಲೆಗೆ ಲಭಿಸಿದೆ. ಮಾಂಡ್ಯವ ಅಲಯನ್ಸ್ ಸಂಸ್ಥೆಯಿಂದ 2 ರಕ್ತದಾನ ಶಿಬಿರ ಆಯೋಜಿಸಿ 250 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಕ್ರೀಡಾಕೂಡ, ಉಚಿತ ದಂತ ಚಿಕಿತ್ಸಾ ಅಭಿಯಾನ, ವೃದ್ದಾಶ್ರಮಗಳಿಗೆ ಪೌಷ್ಟಿಕಾಹಾರ ವಿತರಣೆ, ಸಂಗೀತ ಕಾರ್ಯಕ್ರಮ ಕಾರ್ಯಕಮ ಮಾಡಿದ್ದೇವೆ ಎಂದು ವಿವರಿಸಿದರು.
ಜಿಲ್ಲಾ ಸಂಪುಟ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ರಕ್ಷಿತ್‌ರಾಜ್, ಮಾಂಡವ್ಯ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಜಗದೀಶ್, ವಿ.ಟಿ.ವೆಂಕಟೇಶ್, ಶಂಕರಲಿಂಗೇಗೌಡ ಇತರರಿದ್ದರು.