ಚನ್ನಪಟ್ಟಣ
ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಮ್ಮ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಮೈತ್ರಿ ವಿಚಾರದ ಬಗ್ಗೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಹೇಳುವ ಕಾರಣದಿಂದ ಯೋಗೇಶ್ವರ್ ಈ ಸಭೆ ಆಯೋಜಿಸಿದ್ದರು.
ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರು ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬೇಕು, ಮೋದಿ ಮತ್ತೆ ಪ್ರಧಾನಿಯಾಗಬೇಕು. ಈ ಕಾರಣದಿಂದ ನಾನು ಸಹ ಈ ಮೈತ್ರಿಗೆ ಸಹಮತ ವ್ಯಕ್ತಪಡಿಸುತ್ತೇನೆ ಎಂದರು
ಚನ್ನಪಟ್ಟಣ ಅಂದರೆ, ಕುಮಾರಸ್ವಾಮಿ ಹಾಗೂ ನನಗೆ ಜಿದ್ದಾಜಿದ್ದಿ ಕ್ಷೇತ್ರ. ಈ ಕಾರಣದಿಂದ ಕಾರ್ಯಕರ್ತರಲ್ಲಿ ಹೊಂದಾಣಿಕೆಯಾಗಬೇಕಿದೆ. ಈ ದೃಷ್ಟಿಯಿಂದ ಇಂದು ಸಭೆ ಮಾಡುತ್ತಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಏನು ಅನ್ನೋದು ತಿಳಿಯಬೇಕು. ಅವರ ಅಭಿಪ್ರಾಯ ಅಲಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಕಳೆದ 25 ವರ್ಷಗಳಿಂದ ಜೆಡಿಎಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಬದಲಾದ ಪರಿಸ್ಥಿತಿಯಲ್ಲಿ ಈ ಮೈತ್ರಿ ಅನಿವಾರ್ಯವಾಗಿದೆ ಎಂದರು.
ಇನ್ನು ಮೈತ್ರಿ ವಿಚಾರವಾಗಿ ಬಿಜೆಪಿ ನಾಯಕರಲ್ಲೇ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಮೈತ್ರಿ ಬಗ್ಗೆ ಇನ್ನೊಂದಷ್ಟು ಸಭೆ ಆಗಬೇಕು. ಬೇರೆ ರಾಜ್ಯದಲ್ಲಿ ಚುನಾವಣೆ ಇರುವ ಕಾರಣ ಕೇಂದ್ರ ನಾಯಕರು ಬ್ಯುಸಿ ಇದ್ದಾರೆ. ಎಸ್.ಟಿ ಸೋಮಶೇಖರ್ ಪಕ್ಷ ಬಿಡಬೇಕು ಅಂತ ಮೊದಲಿನಿಂದಲೂ ಸಿದ್ಧವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರು ಡಿಕೆಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡ್ತಿದ್ದಾರೆ. ಮೈತ್ರಿ ವಿಚಾರ ಪ್ರಸ್ತಾಪ ಆಗುವ ಮುಂಚೆಯಿಂದಲೂ ಅವರು ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದರು.