ಶಿವಮೊಗ್ಗ: ಭ್ರಷ್ಟ ಮತ್ತು ಕೆಟ್ಟ ಕಾಂಗ್ರೆಸ್ ಅನ್ನು ತೊಲಗಿಸಲು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅನಿವಾರ್ಯವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ನಾಯಕ ರಾಹುಲ್ ಗಾಂಧಿ ದಿನಕ್ಕೊಂದು ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇವರು(ಕಾಂಗ್ರೆಸ್) ಒಂದೊಂದು ದಿನವೂ ಅಧಿಕಾರದಲ್ಲಿರುವುದು ರಾಜ್ಯಕ್ಕೆ ಅಪಾಯ ಎಂದರು.
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೆಮ್ಮಯ ದಿನಗಳನ್ನು ಜಗತ್ತಿಗೆ ಎತ್ತಿ ತೋರಿಸುತ್ತಿದ್ದಾರೆ. ಇನೊಂದು ಕಡೆ ರಾಹುಲ್ ಗಾಂಧಿ ಆಗಾಗ್ಗೆ ವಿದೇಶಗಳಿಗೆ ತೆರಳಿ ದೇಶವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಬಹಳ ದೊಡ್ಡ ಪ್ರಹಾರ ಆಗುತ್ತಿದೆ. ದೊಡ್ಡ ಉಗ್ರ ದಾಳಿಯನ್ನು ಮಾಡಲಾಗುತ್ತಿದೆ. ದೇಶದ ಏಕತೆ, ಸಮಗ್ರತೆ ಮತ್ತು ಸತ್ಯತೆಗೆ ಬಹಳ ದೊಡ್ಡ ಭಂಗವನ್ನು ತರಲಾಗುತ್ತಿದೆ. ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಇದನ್ನು ಮುಂದಿನ ಲೋಕಸಭಾ ಚುನಾವಣೆ ವೇಳೆ ಜನರೇ ಕೇಳುತ್ತಾರೆ ಎಂದರು.
ಕಾಂಗ್ರೆಸ್‌ನಲ್ಲಿ ಭೂಕಂಪದ ಎಲ್ಲ ಮುನ್ಸೂಚನೆ ಕಾಣುತ್ತಿದೆ. ಸಹಜವಾಗಿ ಆಗುತ್ತಿದೆ. ಕಾಂಗ್ರೆಸ್ಸಿಗರೇ ನಿಜವನ್ನು ಹೊರಗೆ ತರುತ್ತಿದ್ದಾರೆ. ಖಂಡಿತವಾಗಿ ಮುಂದೆ ಏನೆಲ್ಲಾ ನಿರೀಕ್ಷೆ ಮಾಡಬಹುದು ಎಂಬುದನ್ನು ಯೋಚನೆ ಮಾಡಬೇಕಿದೆ. ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಅವರು ಚೆನ್ನಾಗಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ, ಹಿಂದುಳಿದ ವರ್ಗದ ನಾಯಕರಾಗಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಹರಿಪ್ರಸಾದ್ ಅವರು ಕಾಂಗ್ರೆಸ್‌ನ ಒಳಬೇದಿಗೆಯನ್ನು ಹೊರ ಹಾಕುತ್ತಿದ್ದಾರೆ. ಆ ಪಕ್ಷ ಹಳ್ಳ ಹಿಡಿಯುವ ಎಲ್ಲ ಸೂಚನೆಗಳು ಇವೆ ಎಂಬುದು ಅವರ ಬಾಯಿಂದ ಬರುತ್ತಿವೆ. ಸಿಎಂ ಸಿದ್ದರಾಮಯ್ಯ ಪಕ್ಷ ವಿರೋಧಿಯಾಗಿದ್ದಾರೆ. ಅವರ ನಡವಳಿಕೆಯಿಂದ ಪಕ್ಷ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದನ್ನು ಕಾಂಗ್ರೆಸ್ಸಿಗರೇ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.