ಮಂಡ್ಯ: ಪರಿಸರ ಮತ್ತು ಕ್ಯಾನ್ಸರ್ ಆರೋಗ್ಯ ಸಬಲೀಕರಣವೇ ಅಲಯನ್ಸ್ ಪ್ರಮುಖ ಧ್ಯೇಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಸೋಷಿಯೇಷನ್ ಆ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ವತಿಯಿಂದ ಆಯೋಜಿಸಿದ್ದ ಪ್ರಥಮ ವಾರ್ಷಿಕ ಅಲಯನ್ಸ್ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜಾಗತೀಕವಾಗಿ ಸಾಕಷ್ಟು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಿವೆ. ಅವುಗಳಲ್ಲಿ ಭಾರತೀಯರೇ ಸ್ಥಾಪನೆ ಮಾಡಿದ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ವಿಶ್ವವ್ಯಾಪ್ತಿಯಾಗಿ ಬೆಳೆದಿದೆ. ಸೇವೆಗಾಗಿಯೇ ಹುಟ್ಟಿಕೊಂಡು ದೊಡ್ಡಮಟ್ಟದಲ್ಲಿ ಪರಿಸರ ಮತ್ತು ಕ್ಯಾನ್ಸರ್ ಆರೋಗ್ಯ ಸಬಲೀಕರಣಕ್ಕೆ ಪಣತೊಟ್ಟಿದೆ ಎಂದು ನುಡಿದರು.
11 ತಿಂಗಳ ಹಿಂದೆ ಮಂಡ್ಯದಲ್ಲಿ ಪ್ರಾರಂಭವಾದ ಅಲಯನ್ಸ್ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಪ್ರಾರಂಭದಲ್ಲಿ ಸುಮಾರು 150 ಜನ ಸದಸ್ಯರಿದ್ದರು. ಈಗ 26 ಸಂಸ್ಥೆಗಳಿಂದ 500 ಜನ ಸದಸ್ಯರಿದ್ದಾರೆ. ಇದಲ್ಲದೆ 7 ನೂತನ ಸಂಸ್ಥೆಗಳ ಪದಗ್ರಹಣವಾಗಲಿದೆ. ಅಲಯನ್ಸ್ ಸಂಸ್ಥೆ ಪ್ರತಿಯೊಬ್ಬರ ಹೃದಯದಲ್ಲೂ ಸ್ಥಾಪಿಸಲು ಶ್ರಮಿಸಿದ್ದೇನೆ. ನಮ್ಮ ಸಂಸ್ಥೆ ಈಗಾಗಲೇ 150ಕ್ಕೂ ಹೆಚ್ಚು ಸೇವಾ ಕಾರ್ಯವನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ. ಪರಿಸರ, ಆರೋಗ್ಯ ಸೇವೆ ಸೇರಿದಂತೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸಿ 23 ಕ್ಯಾನ್ಸರ್ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ಮತ್ತು 150ಕ್ಕೂ ಹೆಚ್ಚು ಟಿಬಿ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡಿದ್ದೇವೆ ಎಂದರು.
ಅಂತಾರಾಷ್ಟ್ರೀಯ ಅಲಯನ್ಸ್ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಮಾತನಾಡಿ, ಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಕೆ.ಟಿ.ಹನುಮಂತು ಕಾರಣ. ಜಿಲ್ಲಾ ಪ್ರಾಂತಪಾಲರಾಗಿ ತಮ್ಮ ಆಡಳಿತವನ್ನು ಉತ್ತಮ ರೀತಿಯಲ್ಲಿ ನಿಭಾಹಿಸಿದ್ದಾರೆ ಎಂದು ಹೇಳಿದರು.
ಸಂಸ್ಥೆಯ 2ನೇ ಜಿಲ್ಲಾ ಪ್ರಾಂತಪಾಲ ಶಾಸ್ತ್ರೀ, ಮಾಜಿ ನಿರ್ದೇಶಕ ದಿವಾಕರ್, ಮುನಿಯಪ್ಪ, ಅಜಂತಾ ರಂಗಸ್ವಾಮಿ, ಪ್ರೊ.ಡೇವಿಡ್, ಮಾದೇಗೌಡ, ಶಶಿಧರ್ ಈಚಗೆರೆ, ಚಂದ್ರಶೇಖರ್, ರಕ್ಷಿತ್‌ರಾಜ್, ಅಪ್ಪಾಜಿ, ಮಂಜುನಾಥ್, ನಾಗರಾಜು, ರತ್ನಮ್ಮ, ವಸಂತಮ್ಮ, ನೀನಾಪಟೇಲ್, ಲೋಕೇಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಕಿರಗಂದೂರು ಹೊಲಿಗೆ ತರಬೇತಿ ಕೇಂದ್ರಕ್ಕೆ ಹೊಲಿಗೆ ಯಂತ್ರ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು.