ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ವೇದಿಕೆಯಲ್ಲಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ ಮಾತೊಂದು ಕಾಂಗ್ರೆಸ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ‘ಇನ್ನು ಮುಂದೆ ಯಾವುದೇ ಕಾರಣಕ್ಕೂ ಜೆಡಿಎಸ್ ಜತೆ ಮೈತ್ರಿ ಬೇಡ, ಚುನಾವಣೆಗಳನ್ನು ಏಕಾಂಗಿಯಾಗಿ ಫೈಟ್ ಮಾಡೋಣ’ ಎಂದು ದಿನೇಶ್ ಅಭಿಪ್ರಾಯ ನೀಡಿದ್ದರು. ಹಿರಿಯ ನಾಯಕರು, ರಾಜ್ಯ ಉಸ್ತುವಾರಿ ಸಮ್ಮುಖ ಮತ್ತು ಹೈಕಮಾಂಡ್ ಗಮನಿಸುತ್ತಿದ್ದ ಕಾರ್ಯಕ್ರಮದಲ್ಲೇ ದಿನೇಶ್ ಬಹಿರಂಗ ಅಭಿಪ್ರಾಯಕ್ಕೆ ಬೇರೆ ಬೇರೆ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ಸಾಮಾನ್ಯವಾಗಿ ನಿಕಟಪೂರ್ವ ಅಧ್ಯಕ್ಷರು ಜವಾಬ್ದಾರಿ ಹಸ್ತಾಂತರಿಸುವಾಗ ಹೊಸ ಅಧ್ಯಕ್ಷರಿಗೆ ತಮ್ಮ ಅನುಭವದ ಮೇಲೆ ಸಲಹೆ ನೀಡುವುದು ಸಹಜ. ಅದೇ ರೀತಿ ದಿನೇಶ್ ಎಚ್ಚರಿಕೆ ರೂಪದ ಸಲಹೆ ನೀಡಿದ್ದಾರೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಿ.ಕೆ.ಶಿವಕುಮಾರ್ ಮತ್ತು ದೇವೇಗೌಡರ ಕುಟುಂಬದ ನಡುವೆ ಈ ಮುಂಚೆ ಕಿತ್ತಾಟವಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಹಳ ಸಲುಗೆ ಏರ್ಪಟ್ಟಿದೆ. ಈ ಸ್ನೇಹ ಪಕ್ಷದ ಹಿತಕ್ಕೆ ಒಳಿತಲ್ಲ ಎಂಬ ದನಿ ದಿನೇಶ್ ಮಾತಿನಲ್ಲಿ ಅಡಗಿತ್ತು. ಈ ವಿಷಯವನ್ನು ಒತ್ತುಕೊಟ್ಟೇ ಆಡಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಹೈಕಮಾಂಡ್ನ ಕೆಲ ಮುಖಂಡರು ಹಾಗೂ ರಾಜ್ಯ ಕಾಂಗ್ರೆಸ್ನಲ್ಲಿ ಜೆಡಿಎಸ್ ವಿರೋಧಿಸುವ ಗುಂಪು ಬಹಳ ನಾಜೂಕಿನಿಂದ ದಿನೇಶ್ ಬಾಯಲ್ಲಿ ಈ ಮಾತು ಹೇಳಿಸುವ ಮೂಲಕ ಪರೋಕ್ಷವಾಗಿ ಗೌಡರ ಸಖ್ಯಕ್ಕೆ ಹಾತೊರೆಯುತ್ತಿರುವ ಡಿಕೆಶಿಗೆ ಎಚ್ಚರಿಕೆ ಕೊಡಲಾಗಿದೆ ಎಂದೇ ಹೇಳಲಾಗುತ್ತಿದೆ. ಕೆಲವು ಹಿರಿಯ ನಾಯಕರೊಂದಿಗೆ ರ್ಚಚಿಸಿಯೇ ದಿನೇಶ್ ಉದ್ದೇಶಪೂರ್ವಕವಾಗಿ ಈ ಮಾತು ಹೇಳಿರಬಹುದು. ‘ಹಿಂದೆ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ಏಕಾಂಗಿಯಾಗಿ ಹೋಗೋಣ ಎಂದಿದ್ದರು. ಆದರೂ ನಾವು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಸೋತೆವು’ ಎಂಬ ದಿನೇಶ್ ಮಾತು, ಭವಿಷ್ಯದ ಅಭಿಪ್ರಾಯವೂ ಆಗಿರಲಿಕ್ಕೂ ಸಾಕು. ಈ ಮಾತಿಗೆ ಬಹಳ ಗೂಡಾರ್ಥವಿದ್ದು, ಮುಂದೊಂದು ದಿನ ಮಹತ್ವ ಪಡೆದುಕೊಳ್ಳುತ್ತದೆ ಎಂದು ಮಾಜಿ ಸಚಿವರೊಬ್ಬರು ವಿವರಿಸಿದರು.
ರಾಜ್ಯಸಭೆ ಚುನಾವಣೆ ವೇಳೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ದೇವೇಗೌಡರಿಗೆ ಕರೆ ಮಾಡಿ ಬೆಂಬಲಿಸುವ ಮಾತನಾಡಿರುವುದಕ್ಕೂ, ಈಗ ವೇದಿಕೆಯಲ್ಲಿ ಆಡಿದ ಮಾತಿಗೂ ತಾಳೆ ಬರುವುದಿಲ್ಲವಲ್ಲ ಎಂಬ ಪ್ರಶ್ನೆಗೆ ಕೈ ನಾಯಕರಿಂದ ಸ್ಪಷ್ಟ ಉತ್ತರ ಬರಲಿಲ್ಲ. ಆದರೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಓಲೈಸುವುದಕ್ಕೆ ಕಡಿವಾಣ ಹಾಕುವ ಉದ್ದೇಶ ಸೋನಿಯಾ ಅವರದ್ದಾಗಿತ್ತು. ಆ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಲಾಗುತ್ತಿದೆ.