ಜಿಲ್ಲೆ

ಬೆಳ್ತಂಗಡಿ ಮಾರಿಗುಡಿಯಲ್ಲಿ ಪ್ರಮಾಣ : ಶಾಸಕ ಹರೀಶ್ ಪೂಂಜ ಸವಾಲು : ಪ್ರವಾಸಿ ಮಂದಿರ ನಿರ್ಮಾಣ ಭ್ರಷ್ಟಚಾರ ಆರೋಪ ನಿರಾಕರಣೆ

ಬೆಳ್ತಂಗಡಿ: ಬೆಳ್ತಂಗಡಿಯ ನೂತನ ಪ್ರವಾಸಿ ಮಂದಿರ ನಿರ್ಮಾಣದಲ್ಲಿ ಯಾವುದೇ ಅವ್ಯವಹಾರ ಎಸಗಿಲ್ಲ ಮತ್ತು ರಾಷ್ಟೀಯ ಹೆದ್ದಾರಿ ಗುತ್ತಿಗೆದಾರರಿಂದ ಒಂದು ರೂಪಾಯಿ ತೆಗೆದುಕೊಳ್ಳಲಿಲ್ಲ, ಗುತ್ತಿಗೆದಾರ ಬಿಮಲ್ ಸಂಸ್ಥೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ ಶಾಸಕ ಹರೀಶ್ ಪೂಂಜ ರಕ್ಷಿತ್ ಶಿವರಾಂ ಆರೋಪಕ್ಕೆ ಸಂಬಂಧಿಸಿ ಬೆಳ್ತಂಗಡಿ ಮಾರಿಗುಡಿಯಲ್ಲಿ ಪ್ರಮಾಣಕ್ಕೆ ಸಿದ್ಧ ಎಂದು ಹೇಳಿದರು.

ಮಂಗಳವಾರ ಉಜಿರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಪ್ರವಾಸಿ ಮಂದಿರ ನಿರ್ಮಾಣದ ಮೊದಲು ಅದರ ಸ್ಥಿತಿ ಯಾವ ರೀತಿಯಲ್ಲಿ ಇತ್ತು ಎಂದು ತಾಲೂಕಿನ ಜನತೆಗೆ ಗೊತ್ತು. ತಾಲೂಕಿಗೆ ಬರುವ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಒಳ್ಳೆಯ ಪ್ರವಾಸಿ ಮಂದಿರ ಬೇಕು ಎಂದು ಬಿಜೆಪಿ ಸರ್ಕಾರ ಇದ್ದಾಗ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಗುತ್ತಿಗೆದಾರ ಬಿಮಲ್ ಸಂಸ್ಥೆ ಪ್ರವೀಣ್ ಪೂಜಾರಿ ಎಂಬ ಯುವಕ ಪ್ರಾರಂಭ ಮಾಡಿದ್ದು, ಇದರಲ್ಲಿ ನನ್ನ ಪಾಲುದಾರಿಕೆ ಇಲ್ಲ. ಇಂಜಿನಿಯರ್‌ರಿಂದ ಸರ್ಟಿಫಿಕೆಟ್ ಪಡೆದು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ರಾಷ್ಟೀಯ ಹೆದ್ದಾರಿ ಗುತ್ತಿಗೆದಾರ ಡಿ.ಬಿ.ಜೈನ್ ಅವರಿಂದ 3 ಕೋಟಿ ಲಂಚ ತೆಗೆದುಕೊಂಡಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದರು.

ಇಲ್ಲಿಯ ಹವಮಾನದ ಬಗ್ಗೆ ಗುತ್ತಿಗೆದರರಿಗೆ ಮಾಹಿತಿ ಇಲ್ಲದ ಕಾರಣ ಹೆದ್ದಾರಿ ಕಾಮಗಾರಿ ವಿಳಂಬವಾಗಿದೆ. ಇದನ್ನು ತಿಳಿದು ಸಂಸದರು ಮತ್ತು ನಾನು ಮಾತುಕತೆ ನಡೆಸಿ ಮುಗೆರೋಡಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ರಸ್ತೆ ಕಾಮಗಾರಿ ಆಗಲಿದೆ ಎಂದರು.

ವೈಯಕ್ತಿಕ ಸಹಾಯಧನ

2019ರಲ್ಲಿ ಪ್ರವಾಹ ಬಂದಾಗ ಅವರು ಎಲ್ಲಿ ಇದ್ದರು. ಆಗ ಪ್ರತಿ ಮನೆಗೆ ತೆರಳಿ ವೈಯಕ್ತಿಕ ಹಣ 45 ಲಕ್ಷ ರೂ.ಸಹಾಯ ಮಾಡಿದ್ದೇನೆ. ಈಗ ರಕ್ಷಿತ್ ಶಿವರಾಂ ತಹಸೀಲ್ದಾರ್, ಜಿಲ್ಲಾಧಿಕಾರಿ ಬರುವಾಗ ಹಿಂದಿನಿಂದ ಹೋಗುತ್ತಿದ್ದು ಯಾರಿಗಾದರೂ ಹಣ ಕೊಟ್ಟಿದ್ದಾರೆಯೇ? ಈ ಬಾರಿಯೂ ನೆರಿಯ ಪರಿಸರದಲ್ಲಿ ವೈಯಕ್ತಿಕ ಧನಸಹಾಯ ನಾನು ಮಾಡಿದ್ದೇನೆ ಎಂದರು.

ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಗೋಷ್ಠಿಯಲ್ಲಿದ್ದರು.

ಇಡಿ, ಐಟಿ, ಲೋಕಾಯುಕ್ತ ತನಿಖೆಗೆ ಸಿದ್ಧ

ಬೆಳ್ತಂಗಡಿ ಬಸ್ ನಿಲ್ದಾಣ ಕಾಮಗಾರಿಗೆ ಬಿಜೆಪಿ ಸರ್ಕಾರ ಇರುವಾಗಲೇ ಅನುದಾನ ಬಿಡುಗಡೆಗೊಳಿಸುವ ಕುರಿತು ತೀರ್ಮಾನವಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಮೊದಲು ತಮ್ಮ ಬಗ್ಗೆ ತಿಳಿದುಕೊಳ್ಳಬೇಕು. ಗನ್‌ಮ್ಯಾನ್‌ಬೇಕೆಂದು ನಾನು ಕೇಳಿಲ್ಲ. ಗುಪ್ತಚರ ಇಲಾಖೆ ವರದಿ ಆಧರಿಸಿ ನೀಡಲಾಗಿದೆ. ನನ್ನ ಮತ್ತು ನನ್ನ ಕುಟುಂಬದವರ ವಿರುದ್ಧ ಇಡಿ, ಐಟಿ, ಲೋಕಾಯುಕ್ತ ತನಿಖೆಯಾಗಲಿ. ಹಾಗೆಯೇ ರಕ್ಷಿತ್ ಶಿವರಾಂ ಹಾಗೂ ಕುಟುಂಬದವರ ಮೇಲೂ ಈ ತನಿಖೆ ಆಗಬೇಕು. ಚುನಾವಣೆಗೋಸ್ಕರ ಬೆಳ್ತಂಗಡಿಯಲ್ಲಿ ಆರಂಭವಾದ ಬೆಸ್ಟ್ ಫೌಂಡೇಷನ್ ಈಗ ಮೂಲೆಗುಂಪಾಗಿದೆ. ತಾಲೂಕಿನಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲೂ ಕಾಂಗ್ರೆಸ್ ಭ್ರಷ್ಟಾಚಾರ ನಡೆಸುತ್ತಿದೆ. ಪೆರ್ನಾಳೆ ಕೆರೆಯ ದುರಸ್ತಿ ವೇಳೆ ಊರವರು ಸಂಗ್ರಹಿಸಿದ ಹಣ ತಾನು ನೀಡಿದಂತೆ ರಕ್ಷಿತ್ ಶಿವರಾಂ ತೋರಿಸಿಕೊಂಡಿದ್ದಾರೆ. ಮಳೆ ಹಾನಿ ಪ್ರಕರಣಗಳಲ್ಲೂ ತಾಲೂಕಿನಲ್ಲಿ ಅಗತ್ಯ ಅನುದಾನ ಬಿಡುಗಡೆಯಾಗಿಲ್ಲ ಎಂದರು.

ರಕ್ಷಿತ್ ಶಿವರಾಂ ಸಾಮಾನ್ಯ ಜ್ಞಾನ ಇಲ್ಲದೆ ರಾಜಕೀಯ ಮಾಡುತ್ತಿದ್ದು, ಇದು ಕೇಂದ್ರ ಸರ್ಕಾರದ ಯೋಜನೆ. ಅವರಿಂದ ಒಂದು ರೂಪಾಯಿ ಪಡೆದುಕೊಂಡಿಲ್ಲ. ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ನಿರ್ಮಾಣಕ್ಕೆ ಕೇಂದ್ರದ ಸಚಿವರಿಗೆ ಮನವಿ ಮಾಡಿ 700 ಕೋಟಿ ಅನುದಾನ ಮಂಜೂರು ಮಾಡಲು ಪ್ರಯತ್ನ ಮಾಡಿದ್ದೇನೆ. ರಕ್ಷಿತ್ ಶಿವರಾಂಗೆ ಮಾತನಾಡುವ ನೈತಿಕತೆ ಇಲ್ಲ. - ಹರೀಶ್ ಪೂಂಜ, ಶಾಸಕ