ಶ್ರೀನಿವಾಸಪುರ: ಶ್ರೀನಿವಾಸಪುರ ಪುರಸಭೆಗೆ 2021&24 ಅವಧಿಯಲ್ಲಿ ಬಿಡುಗಡೆಯಾಗಿರುವ ವಿವಿಧ ಕಾಮಗಾರಿಗಳ ಅನುದಾನದ ಖರ್ಚು&ವೆಚ್ಚದ ಅಂದಾಜು ಲೆಕ್ಕಪತ್ರವೇ ಕಣ್ಮರೆಯಾಗಿದ್ದು, ಈ ಹಿಂದಿನ ಅಧ್ಯಕ್ಷ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ಹಾಲಿ ಅಧ್ಯಕ್ಷ ಬಿ.ಆರ್.ಭಾಸ್ಕರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಪುರಸಭೆ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾಮಗಾರಿಗಳಿಗೂ ಅಂದಾಜು ವೆಚ್ಚ ಪಟ್ಟಿ ಸಿದ್ಧಪಡಿಸಿಲ್ಲ. ಟೆಂಡರ್ ಕರೆದಿಲ್ಲ. ಆದರೆ ಕಾಮಗಾರಿಗಳಿಗೆ ಬಿಲ್ ಪಾವತಿಯಾಗಿದೆ. ಈ ಹಿಂದಿನ ಅಧ್ಯಕ್ಷರಿಗೆ ಇಷ್ಟ ಬಂದ ಹಾಗೆ ಕಾಮಗಾರಿ ನಿರ್ವಹಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ತನಿಖೆಗೆ ಆಗ್ರಹಿಸಲಾಗುವುದು ಎಂದು ತಿಳಿಸಿದರು. ಕಂದಾಯ ನಿರೀಕ್ಷಕ ಎನ್.ಶಂಕರ್, ಅಭಿಯಂತ ನಾಗರಾಜ್, ಪರಿಸರ ಅಭಿಯಂತ ಲಕ್ಷಿ$್ಮಶ್, ಸಿಬ್ಬಂದಿ ಸಂತೋಷ್, ಸುರೇಶ್, ಪ್ರತಾಪ್, ನಾಗೇಶ್ ಇದ್ದರು.
ನಕ್ಷೆ ಇಲ್ಲದೆ ಇ ಸ್ವತ್ತು
ಪುರಸಭೆ ವ್ಯಾಪ್ತಿಗೆ ಹೊಸದಾಗಿ ಸೇರಿರುವ ಬೈರಪಲ್ಲಿ ಹಾಗೂ ನಲ್ಲಪಲ್ಲಿ, ಕಳ್ಳೂರು ಗ್ರಾಮ ಸೇರಿ ಯಾವುದೇ ನಕ್ಷೆ ಇಲ್ಲದೆ ಮನೆಗಳಿಗೆ ಇ&ಸ್ವತ್ತು ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಆ ಮನೆಗೆ ಹೋಗಿ ಬರಲು ರಸ್ತೆ ವ್ಯವಸ್ಥೆ ಇದೆಯೋ? ಇಲ್ಲವೋ? ಎಂಬುದನ್ನು ಪರಿಶೀಲಿಸಿ ನಂತರ ಇ&ಸ್ವತ್ತು ಮಾಡಿಕೊಡಬೇಕು. ಮಾರುತಿ ನಗರದಲ್ಲಿ 6&7 ಅಡಿಗಳಷ್ಟು ಮಾತ್ರ ರಸ್ತೆ ಇದ್ದು, ಕನಿಷ್ಠ ಪಕ್ಷ ಒಂದು ಕಾರು ಸಂಚರಿಸಲೂ ಆಗುವುದಿಲ್ಲ. ಹಾಗಾಗಿ ಪುರಸಭೆ, ಯುಜಿಡಿ ಹಾಗೂ ಇತರ ಕಾಮಗಾರಿಗಳನ್ನು ನಿರ್ವಹಿಸುವುದಾದರೂ ಹೇಗೆ? ಎಂದು ಭಾಸ್ಕರ್ ಬೇಸರ ವ್ಯಕ್ತಪಡಿಸಿದರು.
ಬಾಕಿ ಕಂದಾಯ ಪಾವತಿಗೆ ಕ್ರಮ
ಪಟ್ಟಣದ ಸಾಕಷ್ಟು ಖಾಸಗಿ ಶಾಲಾ&ಕಾಲೇಜುಗಳು 2004ರಿಂದ ಕಂದಾಯ ಬಾಕಿ ಉಳಿಸಿಕೊಂಡಿವೆ. ಈ ಬಗ್ಗೆ ಆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಲಾಗಿದೆ. ವಾರ್ಡ್ ಸದಸ್ಯರು ಆಯಾ ವಾರ್ಡ್ಗಳ ವ್ಯಾಪ್ತಿಯಲ್ಲಿ ಶಾಲಾ&ಕಾಲೇಜು ಹಾಗೂ ಕಂದಾಯ ಬಾಕಿ ಇರುವವರು ಇದ್ದಲ್ಲಿ ಪಾವತಿಗೆ ಕ್ರಮವಹಿಸಬೇಕು ಎಂದು ಭಾಸ್ಕರ್ ಮನವಿ ಮಾಡಿದರು. ಪುರಸಭೆಗೆ ಆದಾಯ ಬಂದರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಹಾಗೂ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
₹ 15 ಕೋಟಿ ಬಿಡುಗಡೆ
ಪಟ್ಟಣದ ಅಭಿವೃದ್ಧಿಗಾಗಿ 2018ರಲ್ಲಿ ಆಗಿನ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ 15 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದ್ದರು. ಈಜುಕೊಳ, ಶಟಲ್ಕಾಕ್ ಕೋರ್ಟ್ ಹಾಗೂ ಇತರ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಜತೆಗೆ ನಲ್ಲಪಲ್ಲಿ, ಕಲ್ಲೂರು ರಸ್ತೆ ಅಭಿವೃದ್ಧಿ ಪಡಿಸಲು ಅನುದಾನ ಬಳಸಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ 15 ಕೋಟಿ ರೂ.ಗೆ ಇದುವರೆಗೆ ಟೆಂಡರ್ ಕರೆದಿರಲಿಲ್ಲ. ಹಾಗಾಗಿ ಸಭೆಯ ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ 15 ಕೋಟಿ ರೂ. ಅನುದಾನ ಬಳಸಿಕೊಳ್ಳಲು ಅಂಗೀಕರಿಸಲಾಗಿದೆ ಎಂದು ಭಾಸ್ಕರ್ ಮಾಹಿತಿ ನೀಡಿದರು.