ಜಿಲ್ಲೆ

ಕರ್ನಾಟಕ ನೀರಾವರಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ

ಹುಬ್ಬಳ್ಳಿ: ಕರ್ನಾಟಕ ನೀರಾವರಿ ನಿಗಮದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಮಲಪ್ರಭಾ ಬಲದಂಡೆ ಕಾಲವೆ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದೆ. ಈ ನಿಟ್ಟಿನಲ್ಲಿ ಹೋರಾಟ ಮಾಡಿ, ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ವಿವರಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನೀರಾವರಿ ನಿಗಮ ಕಚೇರಿ ರಾಜ್ಯದ 22 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳು ಹೆಚ್ಚುವರಿ ಅನುದಾನ ಪಡೆದು ಅಭಿವೃದ್ಧಿ ಮಾಡುತ್ತಿಲ್ಲ ಎಂದರು.

2020-21ರಲ್ಲಿ ಈ ಬಗ್ಗೆ ರೈತ ಸಂಘ ಬೆಳಕು ಚೆಲ್ಲಿತ್ತು. ಆಗ ಮುನಿರಾಬಾದ್​ನ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ, ನಾಲ್ವರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಆದರೆ, ಕೆಲ ವೈಯಕ್ತಿಕ ಹಿತಾಸಕ್ತಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿವೆ. ಹಿಂದಿನ ನೀರಾವರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರಿಗೆ ಭ್ರಷ್ಟಚಾರ ನಡೆದಿರುವ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುಪ್ಪರಿ ಹಳ್ಳ ಶಾಶ್ವತ ಪರಿಹಾರ ಯೋಜನೆಗೂ 312 ಕೋಟಿ ರೂ. ಅನುದಾನದಲ್ಲಿ 90 ಕಿ.ಮೀ. ಹೂಳೆತ್ತುವ ಕಾಮಗಾರಿಗೆ ಡಿಪಿಆರ್ ಆಗಿದೆ. ಈಗಾಗಲೇ 150 ಕೋಟಿ ರೂ. ಕಾಮಗಾರಿಯಾಗಿದ್ದು, 80 ಕೋಟಿ ರೂ.ಗೆ ಬಿಲ್ ಪಾವತಿಯಾಗಿದೆ. ಆದರೆ, ಅಲ್ಲಿ ಹಣ ಖರ್ಚು ಮಾಡಿದಷ್ಟು ಕಾಮಗಾರಿ ನಡೆದಿಲ್ಲ. ಮಲಪ್ರಭಾ ಬಲದಂಡೆ ಕಾಲುವೆ ಕಾಮಗಾರಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಇಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಕೈಚಳಕವಿದೆ ಎಂದು ಆರೋಪಿಸಿದರು.

ಹೋರಾಟ: ಈ ಎಲ್ಲ ವಿಷಯ ಇಟ್ಟುಕೊಂಡು ಆ. 14ರಂದು ನರಗುಂದದಲ್ಲಿ ರೈತ ಸೇನಾ ಕರ್ನಾಟಕದ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಇಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ವನಿಸಲಾಗುವುದು. ಆ. 16ರಂದು ಬೆಳಗ್ಗೆ 11 ಗಂಟೆಗೆ ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಕಚೇರಿ ಎದುರು ಹೋರಾಟ ಮಾಡುತ್ತೇವೆ ಎಂದು ವೀರೇಶ ಸೊಬರದಮಠ ತಿಳಿಸಿದರು.

ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲೇಕರ್, ವಕ್ತಾರ ಗುರು ರಾಯನಗೌಡರ, ಸದಸ್ಯರಾದ ಬಸವರಾಜ ಗುಡಿ, ಮಹೇಶ ನಾವಳ್ಳಿ, ಗುರಶಾಂತಪ್ಪ ಕಾರಿ ಸುದ್ದಿಗೋಷ್ಠಿಯಲ್ಲಿದ್ದರು.