ಮಡಿಕೇರಿ: ಮಗು ಮಾರಾಟಕ್ಕೆ ಯತ್ನಿಸಿದ್ದ ಆರೋಪ ಎದುರಿಸುತ್ತಿರುವ ಮಡಿಕೇರಿ ನಗರದ ಜಿಲ್ಲಾಸ್ಪತ್ರೆಯ ವೈದ್ಯ ದಂಪತಿ ಹಾಗೂ ಅಶ್ವಿನಿ ಆಸ್ಪತ್ರೆ ಶುಶ್ರೂಷಕಿಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಡಿಕೇರಿ ನಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಡಿ.ಎಚ್.ಒ ಡಾ.ಕೆ.ಮೋಹನ್ ಹಾಗೂ ವೈದ್ಯಕೀಯ ಅಧೀಕ್ಷಕ ಲೋಕೇಶ್‌ರವರಿಗೆ ಗುರುವಾರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿಎಚ್‌ಒ ಡಾ.ಕೆ.ಮೋಹನ್, ಕೊಡಗು ಜಿಲ್ಲಾಸ್ಪತ್ರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕೆಪಿಎಂ ಆ್ಯಕ್ಟ್ ಪ್ರಕಾರ ಆರೋಪಿತ ವೈದ್ಯರ ನರ್ಸಿಂಗ್ ಹೋಂ ನಮ್ಮ ವ್ಯಾಪ್ತಿಗೆ ಬರುತ್ತದೆ. ಜಂಟಿ ನಿರ್ದೇಶಕರು ವರದಿ ನೀಡುವಂತೆ ಸೂಚಿಸಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ವರದಿ ಪರಿಶೀಲಿಸಿ ಕೆಪಿಎಂ ಜಂಟಿ ನಿರ್ದೇಶಕರಿಗೆ ಸಲ್ಲಿಸಲಾಗುವುದು ಎಂದರು.
ವೈದ್ಯಕೀಯ ಅಧೀಕ್ಷಕ ಲೋಕೇಶ್ ಮನವಿ ಸ್ವೀಕರಿಸಿ ಮಾತನಾಡಿ, ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರ ವರದಿಯನ್ನು ಪರಿಶೀಲಿಸಿ ಆ ನಂತರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆಯ ವೈದ್ಯರಿಗೆ ನೋಟಿಸ್ ನೀಡಲಾಗಿದೆ ಎಂದರು.
ಮಡಿಕೇರಿ ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ, ಪ್ರಕರಣದಲ್ಲಿ ನೈಜ ಆರೋಪಿಗಳು ಯಾರು ಎಂಬುದು ಸಾಬೀತಾಗುವವರೆಗೂ ಆರೋಪಕ್ಕೆ ಗುರಿಯಾಗಿರುವ ವೈದ್ಯರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಡಿಕೇರಿ ರಕ್ಷಣಾ ವೇದಿಕೆ ಕಾರ್ಯದರ್ಶಿ ಕೊಟ್ಟಕೇರಿಯನ ಅಜಿತ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಹರೀಶ್, ಖಜಾಂಚಿ ಉಮೇಶ್‌ಗೌಡ, ನಿರ್ದೇಶಕರಾದ ಶ್ರೀನಿವಾಸ್, ರವಿ, ಪಾಪು, ಸತ್ಯ ಮತ್ತಿತರರು ಇದ್ದರು.